ಕರಾವಳಿಯ ಸಮಸ್ಯೆ: ಗೃಹಸಚಿವರೊಂದಿಗೆ ಐವನ್ ಡಿಸೋಜ ಚರ್ಚೆ

ಮಂಗಳೂರು, ಸೆ.5: ಕರಾವಳಿ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಹೆಚ್ಚುವರಿ ಪೊಲೀಸ್ ಸಿಬ್ಬಂದಿ, ಜೈಲಿನ ಸ್ಥಳಾಂತರ ಇತ್ಯಾದಿ ಬಗ್ಗೆ ನೂತನ ಗೃಹ ಸಚಿವ ರಾಮಗಿಂಗ ರೆಡ್ಡಿಯವರನ್ನು ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಚರ್ಚೆ ನಡೆಸಿದರು.
ಕರಾವಳಿಗಳಲ್ಲಿ ಹೆಚ್ಚು ಪೊಲೀಸ್ ವ್ಯವಸ್ಥೆಯನ್ನು ಒದಗಿಸಿಕೊಡಬೇಕು, ಮಂಗಳೂರು ಜೈಲಿನಲ್ಲಿ ಅವ್ಯವಹಾರ ಹೊಡೆದಾಟ ಹಾಗೂ ಹೆಚ್ಚುವರಿ ಕೈದಿಗಳು ಜೈಲಿನಲ್ಲಿರುವುದರಿಂದ ಅನಾಹುತಗಳು ಆಗುವ ಬಗ್ಗೆ ಐವನ್ ಡಿಸೋಜ ಗೃಹ ಸಚಿವರ ಗಮನ ಸೆಳೆದರು.
ದ.ಕ. ಜಿಲ್ಲೆಯ ಕರಾವಳಿ ಭಾಗಗಳಲ್ಲಿ ಕೋಮು-ಸಂಘರ್ಷಗಳು ಮತ್ತು ಅಮಾಯಕರ ಕೊಲೆಗಳು ಕೋಮುವಿಚಾರಗಳ ಬಗ್ಗೆ ಸಂಘರ್ಷಗಳ ಬಗ್ಗೆ ಅಧ್ಯಯನ ನಡೆಸಿ ಪೊಲೀಸ್ ಅಧಿಕಾರಿಗಳು, ಸಂಘರ್ಷಕ್ಕೆ ಕಾರಣಕರ್ತರಾದ ಬಗ್ಗೆ ಅಳವಾಗಿ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ಶಾಂತಿ ಕಾಪಾಡಬೇಕು. ಕರಾವಳಿಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಇವುಗಳ ಬಗ್ಗೆ ಹೆಚ್ಚು ಗಮನ ನೀಡಬೇಕಾಗಿದೆ.
ಮಂಗಳೂರು ಜೈಲ್‌ನಲ್ಲಿ ನಿಗದಿತ ಕೈದಿಗಳಿಗಿಂತ ಅಧಿಕ ಕೈದಿಗಳನ್ನು ಇಡಲಾಗಿದೆ. ಇಲಾಖೆಯ ಅಧಿಕಾರಿಗಳ ಮೇಲೆ ಹಲ್ಲೆ-ಗಲಾಟೆ ನಡೆಸಿ ಕೂಡಲೇ ಜೈಲಿಗೆ ಭೇಟಿ ನೀಡಿ ಜೈಲ್‌ಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಜೊತೆಗೆ ಮಂಗಳೂರು ಜೈಲನ್ನು ಬಂಟ್ವಾಳದ ಬಾಳೆಪುಣಿಗೆ ಸ್ಥಳಾಂತರಗೊಳಿಸಲು ಕಾಮಗಾರಿಗಳನ್ನು ಶೀಘ್ರವಾಗಿ ಕೈಗೊಳ್ಳುವ ಮೂಲಕ ಜೈಲನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರನ್ನು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ನಾಯಕರಾದ ಹೇಮನಾಥ ಶೆಟ್ಟಿ, ಮುಲ್ಕಿ ನಗರ ಪಂಚಾಯತ್‌ನ ಆಸಿಫ್ ಮುಲ್ಕಿ, ಕೆಎಮ್‌ಡಿಸಿ ನಿರ್ದೇಶಕ ಜಿನ್ನಪ್ಪ, ಹ್ಯಾರಿ ಡಿಸೋಜ, ವಾರ್ನ್‌ವಾಜ್ ನಿಯೋಗದಲ್ಲಿದ್ದರು.







