ಕೇಂದ್ರದ ನೀತಿಯಿಂದ ರಾಜ್ಯದ 1,800 ಕನ್ನಡ ಶಾಲೆಗಳು ಮುಚ್ಚಿವೆ: ವೈಎಸ್‍ವಿ ದತ್ತ

ಕಡೂರು, ಸೆ. 5: ಶಿಕ್ಷಣ ಮಕ್ಕಳ ಹಕ್ಕು ಎಂಬ ಕೇಂದ್ರ ಸರ್ಕಾರದ ನೀತಿಯಿಂದ ರಾಜ್ಯದ 1,800 ಕನ್ನಡ ಶಾಲೆಗಳು ಮುಚ್ಚಿವೆ ಎಂದು ಶಾಸಕ ವೈ.ಎಸ್.ವಿ. ದತ್ತ ಗಂಭೀರ ಆರೋಪ ಮಾಡಿದರು.
ಅವರು ಮಂಗಳವಾರ ಪಟ್ಟಣದ ಎಂಆರ್‍ಎಂ ರಂಗಮಂದಿರದ ಆವರಣದಲ್ಲಿ ಜಿಲ್ಲಾ ಮತ್ತು ತಾಲೂಕು ಆಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ನಡೆದ 56ನೇ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.
ಆರ್‍ಟಿಇ ನೀತಿಯಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ವರ್ಷ ರೂ. 600 ಕೋಟಿ ನಷ್ಟವಾಗುತ್ತಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರೂ. 2,400 ಕೋಟಿ ನಷ್ಟವಾಗಿದೆ. ದುರ್ಧೈವ ಎಂದರೆ ಈ ಆರ್‍ಟಿಇ ನೀತಿಯನ್ನು ದೇಶದ ತಮಿಳುನಾಡು ಮತ್ತು ಪಶ್ಚಿಮಬಂಗಾಳ ರಾಜ್ಯಗಳು ತಿರಸ್ಕರಿಸಿವೆ ಎಂದು ಹೇಳಿದರು.
ಬಡ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿಯೂ ಕೂಡ ಗುಣಮಟ್ಟದ ಶಿಕ್ಷಣ ಪಡೆಯಬೇಕೆಂಬ ಪರಿಕಲ್ಪನೆಯಿಂದ ಹುಟ್ಟಿದ ಆರ್‍ಟಿಇ ಶಿಕ್ಷಣ ನೀತಿಯಿಂದ ರಾಜ್ಯದ ನೂರಾರು ಸರ್ಕಾರಿ ಕನ್ನಡ ಶಾಲೆಗಳು ವಿದ್ಯಾರ್ಥಿಗಳು ಇಲ್ಲದೆ ಬಿಕೋ ಎನ್ನುತ್ತಿವೆ. ಆ ಶಾಲೆಗಳಲ್ಲಿರುವ ಶಿಕ್ಷಕರು ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಎಂಬ ಭೂತಕ್ಕೆ ಬಲಿಯಾಗುತ್ತಿದ್ದಾರೆ. ಇಂತಹ ಸರ್ಕಾರದ ನೀತಿ ಖಂಡನೀಯ ಎಂದರು.
ಕಾರ್ಯಕ್ರಮವನ್ನು ಉದ್ಟಾಟಿಸಿದ ಜಿಪಂ ಸದಸ್ಯ ಶರತ್‍ಕೃಷ್ಣಮೂರ್ತಿ ಮಾತನಾಡಿ, ವಿಶ್ವದ ಪ್ರತಿ ದೇಶದಲ್ಲೂ ಶಿಕ್ಷಕರ ದಿನಾಚರಣೆ ಆಚರಣೆ ಆಗುತ್ತದೆ. ಗುರುಸ್ಥಾನ ಉತ್ತಮ ಸ್ಥಾನ. ಗುರುವಿನ ಮಹತ್ವವನ್ನು ಅರಿತು ಗೌರವಿಸಬೇಕು ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ರೇಣುಕಾಉಮೇಶ್ ವಹಿಸಿದ್ದರು. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ಜಿಪಂ ಸದಸ್ಯೆ ಕಾವೇರಿಲಕ್ಕಪ್ಪ ಆನಾವರಣ ಮಾಡಿದರು. ಶಿವಮೊಗ್ಗ ಡಯಟ್ ಕಾಲೇಜಿನ ಹಿರಿಯ ಉಪನ್ಯಾಸಕ ಜಿ.ವಿ. ಹರಿಪ್ರಸಾದ್ ವಿಶೇಷ ಉಪನ್ಯಾಸ ನೀಡಿದರು. ರಾಜ್ಯ ಸರ್ಕಾರದ ನೂತನ ಗುರು ಚೇತನ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸತ್ಯನಾರಾಯಣ, ಶಿಕ್ಷಣ ಸಮನ್ವಯ ಅಧಿಕಾರಿ ಭಾಗ್ಯ, ಅಕ್ಷರದಾಸೋಹ ಅಧಿಕಾರಿ ರಾಮು, ತಾಪಂ ಉಪಾಧ್ಯಕ್ಷ ಪಿ.ಸಿ. ಪ್ರಸನ್ನ, ಸದಸ್ಯೆ ಭಾರತಮ್ಮಪ್ರಹ್ಲಾದ್, ಎಪಿಎಂಸಿ ಅಧ್ಯಕ್ಷ ಮಚ್ಚೇರಿ ಓಂಕಾರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಭೋಗಪ್ಪ ಉಪಸ್ಥಿತರಿದ್ದರು.







