ಬ್ಲೂವೇಲ್ ಚಾಲೆಂಜ್ ಆತ್ಮಹತ್ಯೆಗೆ ಪ್ರಯತ್ನಿಸಿದ ಬಾಲಕಿಯ ರಕ್ಷಣೆ

ಜೋಧ್‌ಪುರ, ಸೆ. 5: ಜಗತ್ತಿನಾದ್ಯಂತ ನೂರಾರು ಸಾವಿಗೆ ಕಾರಣವಾದ ಅಪಾಯಕಾರಿ ಆನ್‌ಲೈನ್ ಆಟ ಬ್ಲೂವೇಲ್ ಚಾಲೆಂಜ್‌ನಿಂದಾಗಿ ರಾಜಸ್ಥಾನದ ಜೋಧ್‌ಪುರದಲ್ಲಿ ಸೋಮವಾರ ಸ್ಥಳೀಯ ಕೆರೆಗೆ ಹಾರಲು ಯತ್ನಿಸಿದ 17 ವರ್ಷದ ಬಾಲಕಿಯನ್ನು ರಕ್ಷಿಸಲಾಗಿದೆ.
ಬಿಎಸ್‌ಎಫ್‌ನ ಯೋಧನ ಪುತ್ರಿಯಾದ ಈಕೆ ಸುಮಾರು 11 ಗಂಟೆ ರಾತ್ರಿ ಕೈಲಾನಾ ಕೆರೆಗೆ ಹಾರಿದ್ದಾಳೆ. ಬಾಲಕಿಯ ಹಾಗೂ ಆಕೆಯ ಹೆತ್ತವರ ಗುರುತು ಪತ್ತೆ ಹಚ್ಚಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಹೆತ್ತವರು ನಮಗೆ ವರದಿ ಮಾಡಿದ್ದರು. ನಾವು ಶೋಧ ಕಾರ್ಯಾ ಆರಂಭಿಸಿದ್ದೆವು. ಇದೆ ಸಂದರ್ಭ ಬಾಲಕಿಯೋರ್ವಳು ಕೈಲಾನಾ ಕೆರೆಗೆ ಹಾರಲು ಪ್ರಯತ್ನಿಸುತ್ತಿರುವ ಮಾಹಿತಿ ಬಂತು ಎಂದು ಮಂದೂರು ಪೊಲೀಸ್ ಠಾಣೆಯ ಅಧಿಕಾರಿ ಮುಖ್ತಾ ಪರೀಕ್ ತಿಳಿಸಿದ್ದಾರೆ.
ಬಾಲಕಿ ಆತ್ಮಹತ್ಯೆ ಮಾಡುವಾಗ ಈ ಪ್ರದೇಶದ ಸಮೀಪ ಇದ್ದ ಲಾರಿ ಚಾಲಕರು ಹಾಗೂ ಪೊಲೀಸರು ಬಾಲಕಿಯನ್ನು ರಕ್ಷಿಸಿದರು ಎಂದು ಅವರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ತಾನು ಬ್ಲೂವೇಲ್ ಚಾಲೆಂಜ್ ಆಟವನ್ನು ಮೊಬೈಲ್‌ಗೆ ಡೌನ್‌ಲೋಡ್ ಮಾಡಿಕೊಂಡಿದ್ದೇನೆ ಎಂದು ಬಾಲಕಿ ಪೊಲೀಸರಲ್ಲಿ ಹೇಳಿರುವುದಾಗಿ ಪರೀಕ್ ತಿಳಿಸಿದ್ದಾರೆ.
ಬಾಲಕಿ ಬ್ಲೂವೇಲ್ ಚಾಲೆಂಜ್‌ನ ಅಂತಿಮ ಟಾಸ್ಕ್ ಅನ್ನು ಪೂರೈಸಲು ಆತ್ಮಹತ್ಯೆ ಪ್ರಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ವಿಟ್ಟರ್ ಮಾಹಿತಿಯಿಂದ ಯುವಕನ ರಕ್ಷಣೆ
ಭುವನೇಶ್ವರ: ಕಾನ್ಪುರದ ಯುವಕನೋರ್ವ ಟ್ವಿಟ್ಟರ್ ಮೂಲಕ ನೀಡಿದ ಮಾಹಿತಿಯಂತೆ ಕಾರ್ಯಪ್ರವೃತ್ತರಾದ ಭುವನೇಶ್ವರ ಪೊಲೀಸರು ಅಪಾಯಕಾರಿ ಬ್ಲೂವೇಲ್ ಗೇಮ್‌ನ 10ನೇ ಟಾಸ್ಕ್ ತಲುಪಿದ್ದ ಯುವಕನನ್ನು ರಕ್ಷಿಸುವಲ್ಲಿ ಸಫಲರಾಗಿದ್ದಾರೆ.
ಕಾನ್ಪುರದ ಯುವಕ ವಿಶಾಲ್ ಶ್ರೀವಾತ್ಸವ ಟ್ವಿಟ್ಟರ್ ಮೂಲಕ ನೀಡಿದ ಸಂದೇಶದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಭುವನೇಶ್ವರ-ಕತಕ್ ಪೊಲೀಸ್ ಕಮಿಷನರೇಟ್ ಬ್ಲೂವೇಲ್ ಚಾಲೆಂಜ್ ಆಟ ಆಡುತ್ತಿದ್ದ ಬಿಟೆಕ್ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿ ಆತನನ್ನು ಗೀಳಿನಿಂದ ಹೊರ ತರುವಲ್ಲಿ ಸಫಲವಾಗಿದೆ.
ಈ ಎಂಜಿನಿಯರಿಂಗ್ ವಿದ್ಯಾರ್ಥಿ ಕಥಕ್‌ನ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ. ಬ್ಲೂವೇಲ್ ಚಾಲೆಂಜ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಆಟವಾಡುತ್ತಾ 10ನೇ ಹಂತದ ಟಾಸ್ಕ್ ವರೆಗೆ ತಲುಪಿದ್ದ.
ಟ್ವಿಟ್ಟರ್ ಮೂಲಕ ವಿಶಾಲ್ ನೀಡಿದ ಮಾಹಿತಿಗೆ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾದರು. ಕೊನೆಗೆ ಕತಕ್‌ನ ಹಾಸ್ಟೆಲ್‌ನಿಂದ ಆ ವಿದ್ಯಾರ್ಥಿಯನ್ನು ಪತ್ತೆ ಹಚ್ಚಿದರು. ಅನಂತರ ಆತನೊಂದಿಗೆ ಸಮಾಲೋಚನೆ ನಡೆಸಿ ಹೆತ್ತವರೊಂದಿಗೆ ಕಳುಹಿಸಿಕೊಟ್ಟರು.







