ನೌಕರರಿಗೆ ಹಣಕಾಸು ಸಂಸ್ಥೆಯ ಅಗತ್ಯವಿದೆ: ಮೋಹನ್

ಸಾಗರ, ಸೆ.5: ಸರ್ಕಾರಿ ನೌಕರರು ತಮ್ಮದೆಯಾದ ಸಹಕಾರಿ ಸಂಸ್ಥೆಯೊಂದನ್ನು ಹೊಂದಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಗಂಗೊಳ್ಳಿ ತಿಳಿಸಿದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ಮೂರನೇ ವರ್ಷದ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನೌಕರರು ತುರ್ತು ಸಂದರ್ಭದಲ್ಲಿ ಹಣಕಾಸಿನ ಸೌಲಭ್ಯ ಪಡೆಯಲು ಹಣಕಾಸು ಸಂಸ್ಥೆಯ ಅಗತ್ಯ ಇದೆ. ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಸರ್ಕಾರಿ ನೌಕರರು ಸಾಲ ಸೌಲಭ್ಯ ಪಡೆಯುವಾಗ ಶೋಷಣೆಗೆ ಒಳಗಾಗಬೇಕಾಗುತ್ತದೆ. ಆದರೆ ತಮ್ಮದೆ ಸಂಸ್ಥೆಯಲ್ಲಿ ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲಸೌಲಭ್ಯ ಪಡೆಯಬಹುದು. ಇದರಿಂದ ಸಂಸ್ಥೆಯು ಸಹ ಅಭಿವೃದ್ದಿಯಾಗುತ್ತದೆ. ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಸರ್ಕಾರಿ ನೌಕರರು ಸಹಕಾರಿ ಸಂಸ್ಥೆಯ ಸದಸ್ಯರಾಗುವ ಮೂಲಕ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು.
ಸಂಸ್ಥೆಯ ಆಂತರಿಕ ಲೆಕ್ಕ ಪರಿಶೋಧಕ ಬಿ.ವಿ.ರವೀಂದ್ರನಾಥ್ ಮಾತನಾಡಿ, ಕಳೆದ ಎರಡು ವರ್ಷದಲ್ಲಿ ಸಹಕಾರಿ ಸಂಸ್ಥೆಯು ಉತ್ತಮ ಬೆಳವಣಿಗೆ ಕಂಡಿದೆ. ಅಪನಗದೀಕರಣದ ನಂತರ ಸಹಕಾರಿ ವ್ಯವಸ್ಥೆಯಲ್ಲಿ ಅನೇಕ ಕಾನೂನು ಬದಲಾವಣೆಗಳು, ತಿದ್ದುಪಡಿಗಳು ನಡೆಯುತ್ತಿದೆ. ಆರ್ಥಿಕ ಸುಧಾರಣೆ ಕ್ರಮಕ್ಕೆ ನಾವು ಒಗ್ಗಿಕೊಳ್ಳುವ ಜೊತೆಗೆ ಇಂತಹ ಸಹಕಾರಿ ಸಂಸ್ಥೆಗಳನ್ನು ಬೆಳೆಸುವ ಕೆಲಸವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೌಹಾರ್ದ ಸಹಕಾರಿ ಸಂಸ್ಥೆಯ ಅಧ್ಯಕ್ಷ ಎಚ್.ಆರ್.ನಾಗಭೂಷಣ್ ನೌಕರರ ಬೇಡಿಕೆ ಮೇರೆಗೆ ಸೆ. 25ರವರೆಗೆ ನಾಗರಿಕರು ಇಡುವ ಠೇವಣಿ ಮೇಲೆ ಶೇ.9 ಹಾಗೂ ಹಿರಿಯ ನಾಗರೀಕರು ಇರಿಸುವ ಠೇವಣಿ ಮೇಲೆ ಶೇ. 9.5 ಬಡ್ಡಿಯನ್ನು ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಪರಮೇಶ್ವರ್, ಸಹಕಾರಿ ಸಂಸ್ಥೆ ನಿರ್ದೇಶಕರಾದ ಮ.ಸ.ನಂಜುಂಡಸ್ವಾಮಿ, ಛಾಯಾಪತಿ, ಎಸ್.ಬಸವರಾಜ್, ಕೃಷಿ ಅಧಿಕಾರಿ ಚಂದ್ರಶೇಖರ ಗೌಡ ಇನ್ನಿತರರು ಹಾಜರಿದ್ದರು.







