ನೀಟ್: ತಮಿಳುನಾಡಿನಲ್ಲಿ ತೀವ್ರಗೊಂಡ ಪ್ರತಿಭಟನೆ

ಚೆನ್ನೈ, ಸೆ. 5: ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಗದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾದ ಎಸ್. ಅನಿತಾ ಅವರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ತಮಿಳುನಾಡಿನಾದ್ಯಂತ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಕಾಲೇಜು ವಿದ್ಯಾರ್ಥಿಗಳು, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ನಗರದ ವಿವಿಧ ಭಾಗಗಳಲ್ಲಿ ಸೇರಿ ನಾಲ್ಕನೇ ದಿನವಾದ ಇಂದು ಕೂಡ ಪ್ರತಿಭಟನೆ ಮುಂದುವರಿಸಿದರು ಹಾಗೂ ಘೋಷಣೆಗಳನ್ನು ಕೂಗಿದರು.
ಈ ನಡುವೆ ಅನಿತಾ ಕುಟುಂಬ ತಮಿಳುನಾಡು ಸರಕಾರ ನೀಡಿದ 7 ಲಕ್ಷ ರೂಪಾಯಿ ಪರಿಹಾರ ಧನವನ್ನು ತಿರಸ್ಕರಿಸಿದೆ.
ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕೆ ನೀಟ್ ಆಧಾರಿತ ಆಯ್ಕೆಯ ವಿರುದ್ಧ ಹಲವು ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವುದರೊಂದಿಗೆ ಪ್ರತಿಭಟನೆ ಪುದುಚೇರಿಯಾದ್ಯಂತ ಪಸರಿಸಿದೆ.
ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನಲ್ಲಿ ನೀಟ್ ವಿರುದ್ಧ ಹೋರಾಡಿರುವ ದಲಿತ ಬಾಲಕಿ ಎಸ್. ಅನಿತಾ ಆತ್ಮಹತ್ಯೆ ಪ್ರಕರಣದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಲಾಗಿದೆ.
ನ್ಯಾಯವಾದಿ ಜಿ.ಎಸ್. ಮಣಿ ಈ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದಾರೆ. ಈ ದಾವೆಯಲ್ಲಿ ತಮಿಳುನಾಡು ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಕೂಡ ಕೋರಲಾಗಿದೆ.







