'ಪ್ರೀತಿಯ ಅಮ್ಮ' ನನ್ನ ಕಳಕೊಂಡ ಸಾಮಾಜಿಕ ಚಳವಳಿಗಳು, ಕಾರ್ಯಕರ್ತರು !
ಲಂಕೇಶರನ್ನು ಮೀರಿ ಮುನ್ನಡೆದ ಗೌರಿ ಲಂಕೇಶ್

ಬೆಂಗಳೂರು, ಸೆ. 5: ಮಂಗಳವಾರ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ತಮ್ಮ ತಂದೆ ದಿವಂಗತ ಲಂಕೇಶರ ಪರಂಪರೆಯನ್ನು ಸಮರ್ಥವಾಗಿ ಮುನ್ನಡೆಸಿದ್ದು ಮಾತ್ರವಲ್ಲದೆ ನಿರ್ಭೀತ ಪತ್ರಕರ್ತೆ ಹಾಗೂ ಸಕ್ರಿಯ ಸಾಮಾಜಿಕ ಕಾರ್ಯಕರ್ತೆಯಾಗಿ ರಾಜಿಯಿಲ್ಲದೆ ಕರ್ತವ್ಯ ನಿರ್ವಹಿಸುತ್ತಲೇ ಇಹಲೋಕದಿಂದ ನಿರ್ಗಮಿಸಿದ್ದಾರೆ.
ಈ ಮೂಲಕ ಪತ್ರಿಕೋದ್ಯಮದಲ್ಲಿ ಲಂಕೇಶರು ಸಾಧಿಸಿದ್ದ ಜನಪ್ರಿಯತೆಯನ್ನು ಮೀರಿದ ಸಾಮಾಜಿಕ ಆಂದೋಲನಗಳ ನಾಯಕಿ ಹಾಗೂ ಅಸಂಖ್ಯಾತ ಯುವ ಕಾರ್ಯಕರ್ತರ ಪ್ರೀತಿಯ ಅಮ್ಮನಾಗಿ ಬೆಳೆಯುವ ಮೂಲಕ ಲಂಕೇಶರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.
2000 ಇಸವಿಯಲ್ಲಿ ಲಂಕೇಶ್ ನಿಧನರಾದರು. ಅಲ್ಲಿಯವರೆಗೆ ರಾಷ್ಟ್ರ ಮಟ್ಟದಲ್ಲಿ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದ ಗೌರಿ ಅದನ್ನು ಸಂಪೂರ್ಣವಾಗಿ ಬಿಟ್ಟು ಬಂದು ಲಂಕೇಶ್ ಪತ್ರಿಕೆಯ ಸಾರಥ್ಯ ವಹಿಸಿಕೊಂಡರು. ಆಕೆ ಮೊದಲ ವಿರೋಧ ಎದುರಿಸಿದ್ದು ತಮ್ಮ ಪ್ರೀತಿಯ ಸೋದರನಿಂದಲೇ. ತಮ್ಮ ಇಂದ್ರಜಿತ್ ಲಂಕೇಶ್, ಲಂಕೇಶ್ ಪತ್ರಿಕೆಯ ಮೇಲೆ ಹಕ್ಕು ಸಾಧಿಸಿದಾಗ ತಮ್ಮ ನಿಲುವಿನೊಂದಿಗೆ ರಾಜಿ ಮಾಡಿಕೊಳ್ಳಲು ಒಪ್ಪದ ಗೌರಿ ಆ ಪತ್ರಿಕೆಯನ್ನು ತಮ್ಮನಿಗೆ ಬಿಟ್ಟು 'ಗೌರಿ ಲಂಕೇಶ್' ಹೆಸರಿನಲ್ಲಿ ಹೊಸ ಪತ್ರಿಕೆಯನ್ನು ಪ್ರಾರಂಭಿಸಿದರು.
ಲಂಕೇಶರು ತಮ್ಮ ನೇರ, ನಿಷ್ಠುರ ಅಭಿಪ್ರಾಯ, ಬರಹಗಳು ಹಾಗೂ ಪತ್ರಿಕೆಯಲ್ಲಿ ಪ್ರಕಟಿಸುವ ಕೆಣಕುವ ವರದಿಗಳಿಂದ ರಾಜ್ಯಾದ್ಯಂತ ಹೆಸರು ಗಳಿಸಿದವರು. ಆದರೆ ಗೌರಿ ಕೇವಲ ಪತ್ರಿಕಾ ಮಾಧ್ಯಮಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. 'ಗೌರಿ ಲಂಕೇಶ್' ಮೂಲಕ ಕೋಮುವಾದಿಗಳು ಹಾಗೂ ಭ್ರಷ್ಟರಿಗೆ ಚಾಟಿ ಬೀಸಿದರು. ಆದರೆ ಅದರ ಜೊತೆ ಜೊತೆಗೆ ಸಕ್ರಿಯವಾಗಿ ಸಾಮಾಜಿಕ ಆಂದೋಲನಗಳಲ್ಲಿ ಕಾರ್ಯಕರ್ತೆಯಾಗಿ, ನಾಯಕಿಯಾಗಿ ಗುರುತಿಸಿಕೊಂಡರು.
ತಾವು ದೃಢವಾಗಿ ನಂಬಿ, ಪಾಲಿಸುವ ಜಾತ್ಯತೀತ ತತ್ವಗಳಿಗೆ ಧಕ್ಕೆ ಬಂದಾಗ ಯಾವುದೇ ಮುಲಾಜಿಲ್ಲದೆ ಅದನ್ನು ಕಟು ಶಬ್ದಗಳಲ್ಲಿ ಖಂಡಿಸುವ ಜೊತೆಗೆ ಬೀದಿಗಿಳಿದು ಅದನ್ನು ವಿರೋಧಿಸುತ್ತಿದ್ದರು. ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಮೂಲಕ ರಾಜ್ಯಾದ್ಯಂತ ವಿವಿಧ ವಿಷಯಗಳಲ್ಲಿ ಪ್ರತಿಭಟನೆ, ಧರಣಿ, ಆಂದೋಲನ, ಅಭಿಯಾನಗಳಲ್ಲಿ ಅವರು ಸದಾ ಮುಂಚೂಣಿಯಲ್ಲಿರುತ್ತಿದ್ದರು.
ಕೇಂದ್ರದ ನರೇಂದ್ರ ಮೋದಿ ಸರ್ಕಾರದ ನೀತಿಗಳನ್ನು ಅತ್ಯಂತ ಕಟುವಾಗಿ ಟೀಕಿಸುತ್ತಿದ್ದ ಗೌರಿ, ಬಿಜೆಪಿ ಹಾಗೂ ಸಂಘ ಪರಿವಾರಗಳ ಅತ್ಯಂತ ಪ್ರಬಲ ಟೀಕಾಕಾರರಾಗಿದ್ದರು. ಅವುಗಳನ್ನು ವಿರೋಧಿಸುವ ಯಾವುದೇ ಪ್ರಜಾಸತ್ತಾತ್ಮಕ ವ್ಯಕ್ತಿ ಅಥವಾ ಸಂಘಟನೆಯನ್ನು ಗೌರಿ ಬೆಂಬಲಿಸುತ್ತಿದ್ದರು. ಅದಕ್ಕಾಗಿಯೇ
ಜೆ ಎನ್ ಯು ವಿವಾದದಲ್ಲಿ ಸುದ್ದಿಯಾದ ಕನ್ಹಯ್ಯಾ ಕುಮಾರ್ ಹಾಗೂ ಉಮರ್ ಖಾಲಿದ್ ಮತ್ತು ಗುಜರಾತ್ ದಲಿತ ಚಳವಳಿಯ ನಾಯಕ ಜಿಗ್ನೇಶ್ ಮೇವಾನಿಯವರನ್ನು ತನ್ನ 'ಪುತ್ರರು' ಎಂದೇ ಘೋಷಿಸಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಈ ಮೂವರು ಯುವನಾಯಕರ ಜೊತೆ ಅವರು ಆಪ್ತ ಒಡನಾಟವನ್ನು ಹೊಂದಿದ್ದು ಅವರ ಚಳವಳಿಗಳ ಕುರಿತು ಸದಾ ಮೆಚ್ಚುಗೆಯ ಮಾತುಗಳನ್ನಾಡಿ, ಅವರಿಗೆ ಉಡುಗೊರೆಗಳನ್ನು ನೀಡಿ ಸಂಭ್ರಮಿಸುತ್ತಿದ್ದರು.
ಅವರು ದೇಶದ ಭವಿಷ್ಯ ಎಂದು ಆಗಾಗ ಹೇಳುತ್ತಿದ್ದರು. ಅವರು ಮಾತ್ರವಲ್ಲದೆ ರಾಜ್ಯದಲ್ಲೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಯುವಜನರಿಗೆ "ನೀವು ನನ್ನ ಮಕ್ಕಳು" ಎಂದೇ ಕರೆದು ಪ್ರೋತ್ಸಾಹಿಸುತ್ತಿದ್ದರು.
ಬೆಂಗಳೂರಿನ ವಿಜಯ ಹೈ ಸ್ಕೂಲ್ ಹಾಗೂ ಸೆಂಟ್ರಲ್ ಕಾಲೇಜುಗಳಲ್ಲಿ ಅಧ್ಯಯನ ಮಾಡಿರುವ ಗೌರಿ ವಿದೇಶದಲ್ಲಿ ಪತ್ರಿಕೋದ್ಯಮ ತರಬೇತಿ ಪಡೆದಿದ್ದರು. ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಉನ್ನತ ಸ್ಥಾನ ತಲುಪಬಹುದಾಗಿದ್ದ ಗೌರಿ ತಮ್ಮ ತಂದೆಯ ನಿಧನದ ಬಳಿಕ ಅದನ್ನು ಬಿಟ್ಟು ಕನ್ನಡ ಪತ್ರಿಕೋದ್ಯಮ ಪ್ರವೇಶಿಸಿ ಲಂಕೇಶ್ ಪತ್ರಿಕೆಯನ್ನು ಮುನ್ನಡೆಸಿದರು.
ಅವರು ಕೆಲವು ನಕ್ಸಲ್ ನಾಯಕರನ್ನು ಮುಖ್ಯವಾಹಿನಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.








