ಮಂಗಳೂರು ಚಲೋ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಶೈಲಪ್ಪ ಬಿದರೂರ
ಗದಗ, ಸೆ.5 : ಇದೇ ಸೆ. 7 ರಂದು ಮಂಗಳೂರಿನಲ್ಲಿ ನಡೆಯುವ ಸಮಾವೇಶವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಶೈಲಪ್ಪ ಬಿದರೂರ ಅವರು ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದ ಅವರು, ರಾಜ್ಯ ಬಿಜೆಪಿ ಯುವ ಮೋರ್ಚಾ ಸಂಘಟನೆಯಿಂದ ಈಗಾಗಲೇ ಮಂಗಳೂರ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೈಕ್ ರ್ಯಾಲಿ ಮೂಲಕ ನೂರಾರು ಕಾರ್ಯಕರ್ತರು ತೆರಳಿದ್ದಾರೆ. ಪಕ್ಷದ ಕಚೇರಿ ಮುಂದೆ ಕಾರ್ಯಕರ್ತರು ಜಮಾವಣೆ ಗೊಂಡಾಗ ಪೊಲೀಸರು ಬಿಜೆಪಿಯ ನೂರಾರು ಕಾರ್ಯಕರ್ತರನ್ನು ಬಂದಿಸಿರುವುದು ಖಂಡನೀಯ. ಮಂಗಳೂರ ಚಲೋ ವಿಫಲಗೊಳಿಸಲು ಪೊಲೀಸ್ ಇಲಾಖೆಯು ಕಾಂಗ್ರೆಸ್ ಪ್ರೀತಿ ವಿಶ್ವಾಸ ಗಳಿಸಲು ಮುಂದಾಗಿದೆ ಎಂದು ಹೇಳಿದರು.
ಹಿಂದು ಸಂಘಟನೆಯ ಕಾರ್ಯಕರ್ತರ ಕೊಲೆಯನ್ನು ಖಂಡಿಸಿ ಅಲ್ಲಿನ ಆಡಳಿತವನ್ನು ಎಚ್ಚರಿಸುವ ಎಚ್ಚರಿಕೆ ಘಂಟೆ ಮಂಗಳೂರ ರ್ಯಾಲಿಯ ಉದ್ದೇಶವಾಗಿದೆ. ಹಿಂದುಗಳಲ್ಲಿ ಆತ್ಮವಿಶ್ವಾಸ ಗಟ್ಟಿಗೊಳಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಸಂತ ಮೇಟಿ, ನಗರಸಭೆ ಸದಸ್ಯ ಮಂಜುನಾಥ ಮುಳಗುಂದ, ಇರ್ಷಾದ ಮಾನ್ವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.





