ಮಕ್ಕಳಿಗೆ ಪಠ್ಯದ ಜತೆಗೆ ಪರಿಶ್ರಮದ ಪಾಠ ಕಲಿಸಿ: ಶಾಸಕ ರಫೀಕ್ ಅಹ್ಮದ್

ತುಮಕೂರು, ಸೆ.5: ಮಕ್ಕಳು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಪಠ್ಯಕ್ರಮದೊಂದಿಗೆ ಪರಿಶ್ರಮದ ಪಾಠ ಕಲಿಸಬೇಕೆಂದು ಶಾಸಕ ಡಾ.ಎಸ್. ರಫೀಕ್ ಅಹ್ಮದ್ ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಡಾ. ಎಚ್.ಎಂ.ಗಂಗಾಧರಯ್ಯ ಸ್ಮಾರಕ ಭವನದಲ್ಲಿಂದು ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ 130ನೆ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಶಿಕ್ಷಕ, ಉಪ ರಾಷ್ಟ್ರಪತಿ, ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ ದೇಶಕ್ಕೆ ಅಪಾರ ಕೊಡುಗೆ ನೀಡಿದ ಡಾ.ರಾಧಾಕೃಷ್ಣನ್ ಅವರ ಗೌರವ ಸೂಚಕವಾಗಿ ಪ್ರತೀ ವರ್ಷ ಸೆ.5ರಂದು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಯಾರೇ ಆಗಲಿ ಇಂದು ಉನ್ನತ ಮಟ್ಟ ತಲುಪಿದ್ದರೆ ಅದಕ್ಕೆ ಅವರ ಶಿಕ್ಷಕರು ನೀಡಿದ ಶಿಕ್ಷಣವೇ ಕಾರಣವೆಂದು ತಿಳಿಸಿದ ಅವರು, ಇಂದಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಜ್ಞಾನಾರ್ಜನೆಗಾಗಿ ಬಳಸಿಕೊಳ್ಳದೆ ಕಾಲಹರಣ, ಆಟಗಳಿಗಾಗಿ ಉಪಯೋಗಿಸುತ್ತಿದ್ದಾರೆ ಎಂದು ತಿಳಿಸಿದರು.
ಬ್ಲೂವೇಲ್‍ನಂತಹ ಆಕರ್ಷಣೆಯ ಆಟಗಳಿಂದ ಮಕ್ಕಳ ಮನಸಿನ ಮೇಲಾಗುತ್ತಿರುವ ಪ್ರತಿಕೂಲ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕೆಂದರಲ್ಲದೆ ಪಠ್ಯಕ್ರಮದೊಂದಿಗೆ ನೈತಿಕತೆ, ಪ್ರಾಮಾಣಿಕತೆ, ಜೀವನದ ಮೌಲ್ಯಗಳನ್ನು ಕಲಿಸಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಸುರೇಶ್‍ಗೌಡ ಮಾತನಾಡಿ, ಡಾ.ರಾಧಾಕೃಷ್ಣನ್ ಅವರು ನಡೆದ ದಾರಿಯಲ್ಲಿ ಶಿಕ್ಷಕರು ಸಾಗಬೇಕು.ಶಿಕ್ಷಣ ವ್ಯವಸ್ಥೆ ಉತ್ತಮವಾಗಿದ್ದರೆ ಆ ದೇಶದ ಆರ್ಥಿಕ,ಸಾಮಾಜಿಕ ಪರಿಸ್ಥಿತಿ ಸುಧಾರಣೆಯಲ್ಲಿರುತ್ತದೆ. ಇಲ್ಲದಿದ್ದಲ್ಲಿ ಅರಾಜಕತೆಯುಂಟಾಗಿ ದೇಶದ ಅಭಿವೃದ್ಧಿಗೆ ಹಿನ್ನಡೆ ಉಂಟಾಗುತ್ತದೆ.ಇಂದಿನ ವಿದ್ಯಾರ್ಥಿಗಳು ಬುದ್ಧಿವಂತರಿದ್ದು ಶಿಕ್ಷಕರೂ ಸಹ ಅವರ ಬೌದ್ಧಿಕ ಮಟ್ಟಕ್ಕನುಗುಣವಾಗಿ ಬದಲಾದ ಕಾಲಕ್ಕೆ ತಕ್ಕಂತೆ ಬೋಧಿಸಬೇಕೆಂದು ಸಲಹೆ ನೀಡಿದರು.
ತುಮಕೂರು ವಿವಿಯ ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ. ನಿತ್ಯಾನಂದ ಬಿ.ಶೆಟ್ಟಿ ಮಾತನಾಡಿ, ಶಿಕ್ಷಕರು ತಮ್ಮ ಬೋಧನಾ ಕ್ರಮದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ಇದರಿಂದ ಬೋಧನಾ ಕ್ರಮವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲು ಹಾಗು ತಿದ್ದಿಕೊಳ್ಳಲು ಅನುಕೂಲವಾಗುತ್ತದೆ. ಮೌಲ್ಯಮಾಪನದ ಬಹಿಷ್ಕಾರ, ಪ್ರಯೋಜನಾ ವಾದಿಯಾಗಿ ಶಿಕ್ಷಕ ವೃತ್ತಿಯನ್ನು ಮಾಡದೆ ಧ್ಯೇಯದ ದೃಷ್ಟಿಯಿಂದ ಸೇವೆ ಸಲ್ಲಿಸಬೇಕೆಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಕಾಂತರಾಜು ಮಾತನಾಡಿ, ಶಿಕ್ಷಕರು ದೇಶವನ್ನು ಕಟ್ಟುವ ಆಧಾರ ಸ್ತಂಭಗಳಿದ್ದಂತೆ. ತಮ್ಮ ವಿದ್ಯಾರ್ಥಿಗಳನ್ನು ಮಾದರಿ ಪ್ರಜೆಗಳನ್ನಾಗಿ ರೂಪಿಸಬೇಕೆಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ಈ ವೇಳೆ ಸರಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ತಲಾ 6 ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ, ಖಾಸಗಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ತಲಾ 6 ಶಿಕ್ಷಕರಿಗೆ ಸಾಧಕ ಪ್ರಶಸ್ತಿ ನೀಡಲಾಯಿತು. ಅಲ್ಲದೆ ನಿವೃತ್ತಿ ಹೊಂದಿದ 52 ಪ್ರಾಥಮಿಕ ಹಾಗೂ 34 ಪ್ರೌಢಶಾಲಾ ಶಿಕ್ಷಕರನ್ನು ಗೌರವಿಸಲಾಯಿತು. ಶಿಕ್ಷಣ ಕ್ಷೇತ್ರದ ವಿಧಾನಪರಿಷತ್ ಸದಸ್ಯ ರಮೇಶ್ ಬಾಬು ಅವರು ಶಿಕ್ಷಕರ ಸೇವೆಯನ್ನು ಮೆಚ್ಚಿ ನೀಡಿರುವ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಗೂಳರವಿ ಶಾಲೆಯ ಡಿ.ಎಸ್.ಪ್ರಕಾಶ್ ಹಾಗೂ ಎಂಪ್ರೆಸ್ ಶಾಲೆಯ ವಿ.ಟಿ.ಕೃಷ್ಣಮೂರ್ತಿ ಅವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ತಾಲೂಕು ಪಂಚಾಯತ್ ಅಧ್ಯಕ್ಷ ಗಂಗಾಂಜನೇಯ, ಡಿಡಿಪಿಐ ಕೆ.ಮಂಜುನಾಥ,ವಿವಿಧ ಶಿಕ್ಷಣ ಸಂಘಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಶಿಕ್ಷಕ ವೃಂದದವರು ಮತ್ತಿತರರು ಹಾಜರಿದ್ದರು.







