ಪತ್ರಕರ್ತೆ, ಖ್ಯಾತ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಕೊಲೆ: ವೆಲ್ಫೇರ್ ಪಾರ್ಟಿ ಖಂಡನೆ
ಮಂಗಳೂರು, ಸೆ. 5: ವರ್ಷಗಳ ಹಿಂದೆ ಸಾಹಿತಿ ಎಂಎಂ ಕಲಬುರ್ಗಿಯ ಮನೆಗೆ ನುಗ್ಗಿ ಕೊಲೆ ಮಾಡಿದ್ದ ದುಷ್ಕರ್ಮಿಗಳು ಇನ್ನೂ ಪತ್ತೆಯಾಗಿಲ್ಲ. ಮತ್ತೋರ್ವ ಸಾಹಿತಿಯ ಬರ್ಬರ ಹತ್ಯೆಯನ್ನು ವೆಲ್ಫೇರ್ ಪಾರ್ಟಿ ಖಂಡಿಸಿದೆ.
ಲಂಕೇಶ್ ಮೇಷ್ಟ್ರವರ ತಂದೆಗೆ ತಕ್ಕ ಪುತ್ರಿಯಾಗಿ, ಬುದ್ಧ ಬಸವ ಅಂಬೇಡ್ಕರ್ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜೀವನದುದ್ದಕ್ಕೂ ಪ್ರತಿಪಾದಿಸುತ್ತಾ, ಅಸಮಾನತೆ, ಅಸತ್ಯ , ಅನ್ಯಾಯಗಳನ್ನು ಗಟ್ಟಿಯಾಗಿ ಪ್ರತಿಭಟಿಸುತ್ತಾ, ಲಂಕೇಶ್ ಪತ್ರಿಕೆಯನ್ನು ನಿರಂತರವಾಗಿ ಮುಂದುವರೆಸುತ್ತಾ, ಶರಣರ; ಸೂಫಿಗಳ, ಸಂತರ ಸಮಾನತೆಯ ನಾಡನ್ನು ಕಟ್ಟಲು ಶ್ರಮಿಸುತ್ತಿದ್ದ ಗೌರಿ ಲಂಕೇಶ್ ಹತ್ಯೆಯಾಗಿರುವುದು ಸೌಹಾರ್ದಯುತ ಭಾರತಿಯರೆಲ್ಲರಿಗೂ ಅತ್ಯಂತ ನೋವುಂಟು ಆಗಿದೆ. ಸಂಘ ಪರಿವಾರದ ಪ್ರಬಲ ವಿರೋಧಿಯಾಗಿದ್ದ ಗೌರಿ ಲಂಕೇಶ್ ಅವರು 2008ರಲ್ಲಿ ಸಂಘ ಪರಿವಾರದ ವಿರುದ್ಧ ಬರೆದ ಒಂದು ಲೇಖನದ ವಿರುದ್ಧ ಇತ್ತೀಚೆಗೆ ಶಿಕ್ಷೆಯೂ ಅನುಭವಿಸಿದ್ದರು. ಈ ದುರ್ಘಟನೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಬಲವಾಗಿ ಖಂಡಿಸುತ್ತದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ತಾಹೀರ್ ಹುಸೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





