ಮಾನವನಿಗೆ ಮರುಜನ್ಮವಿಲ್ಲ ಎಂದು ಸಾರಿದ ಧೀಮಂತ ವ್ಯಕ್ತಿ ಬ್ರಹ್ಮಶ್ರೀ ನಾರಾಯಣ ಗುರು: ಅಜಿತ್ ಕುಮಾರ್ ರೈ

ಶಿಡ್ಲಘಟ್ಟ, ಸೆ.6: ಜಾತಿ, ಮತ ಭೇದವಿಲ್ಲದೇ ಎಲ್ಲರೂ ಒಂದೇ ಎಂಬ ಸಂದೇಶವನ್ನು ಸಾರಿ, ಪರಿಸರ ರಕ್ಷಣೆ ಜಾಗೃತಿ ಮೂಡಿಸಿದವರು. ಹಾಗೂ ಮಾನವನಿಗೆ ಮರುಜನ್ಮವೆಂಬುದಿಲ್ಲ ಎಂದು ಸಾರಿದ ಧೀಮಂತ ವ್ಯಕ್ತಿ ಬ್ರಹ್ಮಶ್ರೀ ನಾರಾಯಣ ಗುರು ಎಂದು ತಹಶೀಲ್ದಾರ್ ಅಜಿತ್ ಕುಮಾರ್ ರೈ ತಿಳಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ರಹ್ಮಶ್ರೀ ನಾರಾಯಣ ಗುರುಗಳು ಮಹಾತ್ಮ ಗಾಂಧೀಜಿಯವರ ಒಡನಾಟದಲ್ಲಿ ಗುರುತಿಸಿಕೊಂಡು ದೇಶಕ್ಕಾಗಿ ಹೋರಾಡಿದ ಮಹಾನ್ ವ್ಯಕ್ತಿ. ಕೇರಳದ ಮೂಲದವರಾದ ಇವರು ದೇಶದಾದ್ಯಂತ ಸಂಚರಿಸಿ ಮನುಕುಲದ ಏಳಿಗೆಗೆ ಸಲ್ಲಿಸಿದ ಸೇವೆ ಸ್ಮರಿಸಿ ಅವರ ಸ್ಮರಣೆಯಲ್ಲಿ ಅಂಚೆ ಚೀಟಿ ಹಾಗು 5 ರೂ ನಾಣ್ಯದಲ್ಲಿ ಇವರ ಭಾವಚಿತ್ರವನ್ನು ಮುದ್ರಿಸುವ ಮೂಲಕ ಗೌರವ ತೋರಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಪಂ ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ನಗರಸಭೆ ಆಯುಕ್ತ ಚಲಪತಿ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಎಸ್.ಐ. ಪ್ರದೀಪ್ ಪೂಜಾರಿ, ಆರ್ಯ ಈಡಿಗ ಸಂಘದ ತಾಲ್ಲೂಕು ಅಧ್ಯಕ್ಷ ಸಾದಲಿ ಎಸ್.ಎನ್.ವೆಂಕಟಾಚಲಪತಿ, ಕಾರ್ಯದರ್ಶಿ ಎಸ್.ಜೆ.ನಾಣಪ್ಪ, ವೆಂಕಟೇಶ, ನಾರಾಯಣಸ್ವಾಮಿ, ನಾಗಪ್ಪ, ರಾಮಪ್ಪ, ಅಶೋಕ ಹಾಜರಿದ್ದರು.





