ಗೌರಿ ಲಂಕೇಶ್ ಹತ್ಯೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ: ದಿನೇಶ್ ಪಟವರ್ಧನ್

ಚಿಕ್ಕಮಗಳೂರು, ಸೆ6: ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆ ಪೂರ್ವ ಯೋಜಿತ ಹೇಯ ಕೃತ್ಯವಾಗಿದ್ದು ನಾಗರಿಕ ಸಮಾಜ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎಂದು ಪತ್ರಕರ್ತ, ಪ್ರೆಸ್‍ಕ್ಲಬ್ ಅಧ್ಯಕ್ಷ ದಿನೇಶ್ ಪಟವರ್ಧನ್ ಹೇಳಿದರು.
ಅವರು ಬುಧವಾರ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಮತ್ತು ವಿವಿಧ ಪಕ್ಷಗಳ ಮುಖಂಡರು ನಗರದಲ್ಲಿ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ ಅನೇಕರೊಡನೆ ಗೌರಿ ಲಂಕೇಶ್ ಅವರ ಸಂಪರ್ಕವಿತ್ತು. ಬಾಬಾಬುಡಾನ್‍ಗಿರಿ ವಿವಾದಿತ ವಿಷಯ, ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ವಿರೋಧಿ ಹೋರಾಟ ಸೇರಿದಂತೆ ಜಿಲ್ಲೆಯ ಅನೇಕ ಹೋರಾಟಗಳಲ್ಲಿ ಅವರು ಭಾಗವಹಿಸಿದ್ದರು ಎಂದು ಸ್ಮರಿಸಿದ ಅವರು, ಇಂತಹ ದಿನ ಬರಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ ಇದೊಂದು ಅತ್ಯಂತ ನೋವಿನ ಸಂಗತಿ. ಹತ್ಯೆಯ ಆರೋಪಿಗಳನ್ನು ರಾಜ್ಯ ಸರ್ಕಾರ ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಹೆಚ್.ದೇವರಾಜ್ ಮಾತನಾಡಿ, ಗೌರಿ ಲಂಕೇಶ್ ಅವರ ಹತ್ಯೆ ಇಡೀ ರಾಜ್ಯದ ಪ್ರಗತಿಪರರ ಹತ್ಯೆ. ಗೌರಿ ಲಂಕೇಶ್ ಅವರ ಹತ್ಯೆಯಿಂದಾಗಿ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಗೌರಿ ಲಂಕೇಶ್ ಅವರನ್ನು ಕೊಲ್ಲಬಹುದು ಆದರೆ ಅವರ ವಿಚಾರಧಾರೆ ಮತ್ತು ಹೋರಾಟಗಳನ್ನು ಕೊಲ್ಲಲು ಸಾಧ್ಯವಿಲ್ಲ ಎಂದರು.
ಸಿಪಿಐ ಮುಖಂಡ ಎಚ್.ಎಂ.ರೇಣುಕಾರಾಧ್ಯ ಮಾತನಾಡಿ, ಗೌರಿ ಲಂಕೇಶ್ ಅವರ ಹತ್ಯೆಯ ವಿರುದ್ದ ಬರೀ ಪ್ರತಿಭಟನೆ ನಡೆಸಿದರಷ್ಟೇ ಸಾಲದು ಇದರ ವಿರುದ್ಧ ಪ್ರಗತಿ ಪರರೆಲ್ಲರೂ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಕೋಮು ಸೌಹಾರ್ದ ವೇದಿಕೆಯ ಮುಖಂಡ ಗೌಸ್ ಮೊಹಿಯುದ್ದೀನ್ ಮಾತನಾಡಿ, ಗೌರಿ ಮತ್ತು ಕಲ್ಬುರ್ಗಿ ಅವರ ಹತ್ಯೆಯಿಂದ ಪ್ರಗತಿಪರರ ಹೋರಾಟ ಎಂದಿಗೂ ನಿಲ್ಲುವುದಿಲ್ಲ, ಗೌರಿ ಮತ್ತು ಕಲ್ಬುರ್ಗಿ ಅಂತವರು ಸಾವಿರಾರು ಜನ ಹುಟ್ಟಿ ಬರುತ್ತಾರೆ. ಜಿಲ್ಲೆಯಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳುವ ಮೂಲಕ ಕೋಮುವಾದಿಗಳಿಗೆ ತಕ್ಕ ಉತ್ತರ ನೀಡಲಾಗುವುದು ಎಂದು ಘೋಷಿಸಿದರು.
ಅಂಗಡಿ ಚಂದ್ರು ಮಾತನಾಡಿದರು. ಗೌರಿ ಲಂಕೇಶ್ ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನಾಚರಣೆ ಮಾಡಲಾಯಿತು. ಆಝಾದ್ ಪಾರ್ಕ್ ವೃತ್ತದ ಬಳಿ ಮೆರವಣಿಗೆ ನಡೆಸಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ನಂತರ ಧರಣಿ ನಡೆಸಿ ಗೌರಿ ಲಂಕೇಶ್ ಅಮರ್ ರಹೇ ಘೋಷಣೆ ಕೂಗುವ ಜೊತೆಗೆ ಹತ್ಯೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ ಮುಖಂಡರಾದ ರಾಧಾ ಸುಂದರೇಶ್, ಬಿ.ಅಮ್ಜದ್, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಶ್ ಬಸಪ್ಪ, ರೈತ ಸಂಘದ ಮುಖಂಡರಾದ ಆರ್.ಆರ್.ಮಹೇಶ್, ಗುರುಶಾಂತಪ್ಪ, ಕೆ.ಕೆ.ಕೃಷ್ಣೇಗೌಡ, ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಜೆ.ಡಿಎಸ್ ಮುಖಂಡರಾದ ದೇವರಾಜ ಅರಸ್, ಆರ್.ದೇವಿಪ್ರಸಾದ್, ಮಂಜಪ್ಪ, ಪದ್ಮಾ ತಿಮ್ಮೇಗೌಡ, ಡಿಎಸ್‍ಎಸ್ ಮುಖಂಡ ಮರ್ಲೆ ಅಣ್ಣಯ್ಯ ಪಾಲ್ಗೊಂಡಿದ್ದರು.







