ಅಂಗಾಂಗ ದಾನದ ಮೂಲಕ ಎರಡು ಜೀವಗಳನ್ನುಳಿಸಿದ 14 ತಿಂಗಳ ಮಗು

ಅಹ್ಮದಾಬಾದ್,ಸೆ.6: ಸೂರತ್‌ನ 14 ತಿಂಗಳ ಮಗು ಸೋಮನಾಥ ಶಾ ಹೃದಯ ಮತ್ತು ಮೂತ್ರಪಿಂಡಗಳ ಅತ್ಯಂತ ಕಿರಿಯ ದಾನಿಯಾಗುವ ಮೂಲಕ ಎರಡು ಜೀವಗಳಿಗೆ ಮರುಜನ್ಮ ನೀಡಿದ್ದಾನೆ.
ಮಂಗಳವಾರ ಸೋಮನಾಥನ ಹೃದಯವನ್ನು ಮುಂಬೈನ ಮೂರೂವರೆ ವರ್ಷದ ಆರಾಧ್ಯಾ ಮುಳೆ ಎಂಬ ಬಾಲಕಿಗೆ ಮತ್ತು ಮೂತ್ರಪಿಂಡಗಳನ್ನು ಬನಾಸಕಾಂತಾ ಜಿಲ್ಲೆಯ ದೀಸಾ ಗ್ರಾಮದ 15ರ ಹರೆಯದ ಬಾಲಕನಿಗೆ ಕಸಿ ಮಾಡಲಾಗಿದೆ. ಶನಿವಾರ ಆಟವಾಡಿಕೊಂಡಿದ್ದ ಸಮಯ ಬಿದ್ದು ತಲೆಗೆ ಗಾಯಗೊಂಡಿದ್ದ ಸೋಮನಾಥನ ಮಿದುಳು ನಿಷ್ಕ್ರಿಯವಾಗಿದೆ ಎಂದು ರವಿವಾರ ವೈದ್ಯರು ಘೋಷಿಸಿದ್ದರು.
ಮೂಲತಃ ಬಿಹಾರದ ಸಿವಾನ್ ಜಿಲ್ಲೆಯ ಮುಬಾರಕ್‌ಪುರ ಗ್ರಾಮದ ಶಾ ಕುಟುಂಬವು ಕೆಲವು ತಿಂಗಳ ಹಿಂದಷ್ಟೇ ಸೂರತ್‌ಗೆ ವಲಸೆ ಬಂದಿತ್ತು. ಮಗುವಿನ ತಂದೆ ಸುನಿಲ್ ಅಲ್ಲಿಯ ವಿದ್ಯುತ್ ಚಾಲಿತ ಮಗ್ಗದ ಘಟಕವೊಂದರಲ್ಲಿ ಸೂಪರ್‌ವೈಸರ್ ಆಗಿ ದುಡಿಯುತ್ತಿದ್ದಾರೆ. ಶನಿವಾರ ಸಂಜೆ ಏಳು ಗಂಟೆಯ ಸುಮಾರಿಗೆ ಮನೆಯ ಬಳಿ ಅಕ್ಕ ಕುಸುಮ್ ಜೊತೆ ಆಟವಾಡಿಕೊಂಡಿದ್ದ ಸೋಮನಾಥ ಆಕಸ್ಮಿಕವಾಗಿ ಮೆಟ್ಟಿಲುಗಳಿಂದ ಜಾರಿ ಕೆಳಕ್ಕೆ ಬಿದ್ದಿದ್ದ. ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಜ್ಞಾಶೂನ್ಯನಾಗಿದ್ದ ಮಗುವನ್ನು ಹೆತ್ತವರು ಸ್ಥಳೀಯ ವೈದ್ಯರ ಬಳಿಗೆ ಕರೆದೊಯ್ದಿದ್ದರು. ಅವರ ಸಲಹೆಯ ಮೇರೆಗೆ ನೂತನ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಸಿಟಿ ಸ್ಕಾನ್ ನಡೆಸಿದಾಗ ಮಗು ಮಿದುಳು ಸಾವನ್ನಪ್ಪಿದೆ ಎನ್ನುವುದು ಬೆಳಕಿಗೆ ಬಂದಿತ್ತು. ಮಗುವಿಗೆ ಮಿದುಳು ರಕ್ತಸ್ರಾವವಾಗಿದ್ದು, ತಲೆಬುರುಡೆಯ ಹಲವಾರು ಕಡೆ ಮುರಿತಗಳಾಗಿದ್ದವು.
ಆಸ್ಪತ್ರೆಯ ವೈದ್ಯರಿಂದ ಸೋಮನಾಥ ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಮಾಹಿತಿ ಪಡೆದ ಅಂಗದಾನವನ್ನು ಜನಪ್ರಿಯಗೊಳಿಸಲು ಶ್ರಮಿಸುತ್ತಿರುವ ಸೂರತ್‌ನ ಡೊನೇಟ್ ಲೈಫ್‌ನ ಅಧ್ಯಕ್ಷ ನಿಲೇಶ ಮಾಂಡ್ಲೆವಾಲಾ ಅವರು ಶಾ ಕುಟುಂಬಕ್ಕೆ ಅಂಗಾಂಗ ದಾನದ ಮಹತ್ವವನ್ನು ವಿವರಿಸಿ ಸೋಮನಾಥನ ಅಂಗಾಂಗ ದಾನಕ್ಕೆ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು.
ಮಂಗಳವಾರ ಬೆಳಗ್ಗೆ ಸೋಮನಾಥನ ಹೃದಯವನ್ನು ಹೊರಕ್ಕೆ ತೆಗೆದು ಒಂದೇ ಗಂಟೆಯ ಅವಧಿಯೊಳಗೆ ಮುಂಬೈನ ಫೋರ್ಟಿಸ್ ಆಸ್ಪತ್ರೆಗೆ ತಲುಪಿಸಲಾಗಿತ್ತು ಮತ್ತು ಮುಂದಿನ ಅರ್ಧ ಗಂಟೆಯೊಳಗೆ ಆರಾಧ್ಯಾಳಿಗೆ ಅದನ್ನು ಕಸಿ ಮಾಡಲು ಶಸ್ತ್ರಚಿಕಿತ್ಸೆ ಆರಂಭಗೊಂಡಿತ್ತು. ಆರಾಧ್ಯಾ ಕಳೆದೊಂದು ವರ್ಷದಿಂದಲೂ ಗಂಭೀರ ಹೃದಯ ಕಾಯಿಲೆಯಿಂದ ನರಳುತ್ತಿದ್ದಳು. ಇದೇ ವೇಳೆ ಸೋಮನಾಥನ ಮೂತ್ರಪಿಂಡಗಳನ್ನು ಅಹ್ಮದಾಬಾದ್‌ನ ಇನ್‌ಸ್ಟಿಟ್ಯೂಟ್ ಆಫ್ ಕಿಡ್ನಿ ಡಿಸೀಸಸ್ ಆ್ಯಂಡ್ ರೀಸರ್ಚ ಸೆಂಟರ್‌ನಲ್ಲಿ 15ರ ಹರೆಯದ ಬಾಲಕನಿಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು. ಈತ ಕಳೆದ ಹತ್ತು ವರ್ಷಗಳಿಂದಲೂ ಮೂತ್ರಪಿಂಡ ವೈಫಲ್ಯದಿಂದ ನರಳುತ್ತಿದ್ದ. ಬದಲಿ ಅಂಗ ಜೋಡಣೆಯ ಬಳಿಕ ಇದೀಗ ಇವರಿಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ.







