ಮಾತೃಪೂರ್ಣ ಯೋಜನೆಯ ಪ್ರಗತಿ ಸಾಧಿಸಿ: ಸಿ.ಅನಿತಾ

ತುಮಕೂರು, ಸೆ.6:ಗರ್ಭಿಣಿ ಹಾಗೂ ಬಾಣಂತಿಯರಿಗೆ ಮಧ್ಯಾಹ್ನದ ಹೊತ್ತಿನಲ್ಲಿ ಪೌಷ್ಠಿಕ ಬಿಸಿ ಊಟ ನೀಡುವ “ಮಾತೃಪೂರ್ಣ” ಯೋಜನೆಯನ್ನು ಜಿಲ್ಲೆಯಲ್ಲಿ ಮುಂಬರುವ ಅಕ್ಟೋಬರ್ 2 ರಿಂದ ಅನುಷ್ಠಾನಗೊಳಿಸುವ ಸಂಬಂಧ ಅಪರ ಜಿಲ್ಲಾಧಿಕಾರಿ ಸಿ. ಅನಿತಾ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಯಿತು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಸಭೆಯಲ್ಲಿ ಮಾತೃಪೂರ್ಣ ಯೋಜನೆಯನ್ನು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿದ್ದು,ಗರ್ಭಿಣಿ ಹಾಗೂ ಬಾಣಂತಿಯರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.ಈ ಯೋಜನೆಯನ್ನು ಅಕ್ಟೋಬರ್ 2ರಿಂದ ರಾಜ್ಯದಾದ್ಯಂತ ಅನುಷ್ಟಾನಗೊಳಿಸುತ್ತಿದ್ದು, ಜಿಲ್ಲೆಯ ಇನ್ನುಳಿದ ತಾಲ್ಲೂಕುಗಳಿಗೂ ವಿಸ್ತರಿಸಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು, ಗರ್ಭಿಣಿ ಹಾಗೂ ಬಾಣಂತಿಯರ ಅವಧಿಯಲ್ಲಿ ಮಗುವಿನ ಆರೋಗ್ಯ ದೃಷ್ಟಿಯಿಂದ ಅತಿ ಮಹತ್ವದಾಗಿದ್ದು, ಈ ಅವಧಿಯಲ್ಲಿ ಉತ್ತಮ ಪೌಷ್ಠಿಕ ಆಹಾರವನ್ನು ಸೇವಿಸುವುದು ಅತಿಮುಖ್ಯವಾಗಿದೆ. ಮಾತೃಪೂರ್ಣ ಯೋಜನೆಯ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಬೇಕು. ಇಲ್ಲದಿದ್ದಲ್ಲಿ ಯೋಜನೆ ಸಫಲವಾಗುವುದಿಲ್ಲ ಎಂದು ಅವರು ತಿಳಿಸಿದರು.
ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಅಪೌಷ್ಠಿಕತೆಯನ್ನು ಕಡಿಮೆ ಮಾಡಿ, ಶಿಶು ಮರಣ ಹಾಗೂ ತಾಯಂದಿರ ಮರಣ ಪ್ರಮಾಣವನ್ನು ತಗ್ಗಿಸುವುದು ಈ ಯೋಜನೆ ಉದ್ದೇಶ.ಗರ್ಭಿಣಿಯರಿಗೆ 100 ಕಬ್ಬಿಣಾಂಶದ ಮಾತ್ರೆಗಳನ್ನು ನೀಡುವುದು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ತಯಾರಿಸುವ ಪೌಷ್ಟಿಕ ಬಿಸಿ ಊಟವನ್ನು ಮಧ್ಯಾಹ್ನದ ಹೊತ್ತಿನಲ್ಲಿ ಬಾಣಂತಿಯರು ಹಾಗೂ ಗರ್ಭಿಣಿಯರು ಅಂಗನವಾಡಿ ಕೇಂದ್ರಕ್ಕೆ ಆಗಮಿಸಿ ತಿನ್ನಬೇಕು.ಇದರಿಂದ ಅವರಲ್ಲಿ ಪೌಷ್ಟಿಕತೆ ಹೆಚ್ಚಲಿದೆ ಎಂದರು.
ಮಹತ್ವಾಕಾಂಕ್ಷಿ “ಮಾತೃಪೂರ್ಣ”ಯೋಜನೆಯ ಬಗ್ಗೆ ಜಿಲ್ಲಾ ಪಂಚಾಯತ್ ,ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸಭೆಗಳಲ್ಲಿ ಹಾಗೂ ಜನಪ್ರತಿನಿಧಿಗಳ ವಿವಿಧ ಕಾರ್ಯಕ್ರಮಗಳಲ್ಲಿ ಮಾಹಿತಿಯನ್ನು ನೀಡುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆಯನ್ನು ತಯಾರಿಸಲು ಅಗತ್ಯವಿರುವ ಪರಿಕರಗಳನ್ನು ಒದಗಿಸಲಾಗುವುದು. ಇಲ್ಲಿ ತಯಾರಾಗುವ ಬಿಸಿಊಟ ಶುಚಿ ಮತ್ತು ರುಚಿಯಿಂದ ಕೂಡಿರಬೇಕು.ಇದಕ್ಕೆ ಕುರಿತು ಮಹತ್ವ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆರೋಗ್ಯ ಇಲಾಖೆ ನೀಡುವ ತಾಯಿಕಾರ್ಡ್‍ನ್ನು ಹಾಜರುಪಡಿಸಿ ಅಂಗನವಾಡಿ ಕೇಂದ್ರಗಳಲ್ಲಿ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು. ಆನಂತರ ಸೌಲಭ್ಯವನ್ನು ಪಡೆಯಬಹುದು. ಮಧುಗಿರಿ ತಾಲೂಕಿನಲ್ಲಿ ಈಗಾಗಲೇ ಸಾಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ. ಬಿಸಿಯೂಟದ ಜೊತೆಯಲ್ಲಿ ಮೊಟ್ಟೆ ತಿನ್ನುವವರಿಗೆ ಮೊಟ್ಟೆ ನೀಡಲಾಗುವುದು. ತಿನ್ನದವರಿಗೆ ಮೊಳಕೆ ಕಟ್ಟಿದ ಹೆಸರುಕಾಳನ್ನು ನೀಡಲಾಗುವುದು ಎಂದು ಯೋಜನೆಯ ಕುರಿತು ಮಧುಗಿರಿ ತಾಲ್ಲೂಕಿನ ಸಿಡಿಪಿಒ ಸಭೆಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಆರ್‍ಸಿಎಚ್ ಅಧಿಕಾರಿ, ತಾಲೂಕು ಮಟ್ಟದ ಆರೋಗ್ಯಾಧಿಕಾರಿಗಳು, ಸಿಡಿಪಿಓಗಳು ಮತ್ತಿತರರು ಹಾಜರಿದ್ದರು.







