ಪುತ್ತೂರು: ಗೌರಿ ಲಂಕೇಶ್ ಹತ್ಯೆ ಖಂಡಿಸಿ ಎಸ್‍ಡಿಪಿಐ ಪ್ರತಿಭಟನೆ

ಪುತ್ತೂರು,ಸೆ.6: ವಿಚಾರವಾದಿಗಳನ್ನು ನಿರ್ದಯವಾಗಿ ಹತ್ಯೆಗೆಯ್ಯುವ ಸರಣಿ ಮುಂದುವರೆದಿದ್ದು ಗೌರಿ ಲಂಕೇಶ್‍ರವರ ಹತ್ಯೆ ಮುಂದುವರೆದ ಭಾಗವಾಗಿದೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರ್ಭಯವಾಗಿ ವ್ಯಕ್ತಪಡಿಸುತ್ತಿದ್ದ ಮತ್ತು ಮತಾಂಧ ಶಕ್ತಿಗಳ ವಿರುದ್ದ ವೈಚಾರಿಕ ಸಂಘರ್ಷಕ್ಕೆ ಇಳಿದಿದ್ದ ವಿಚಾರವಾದಿಗಳನ್ನು ಒಬ್ಬೊಬ್ಬರಾಗಿ ಕೊಲ್ಲಲಾಗುತ್ತಿದೆ ಇದರ ಹಿಂದೆ ಫ್ಯಾಸಿಸ್ಟ್ ಶಕ್ತಿಗಳ ಕೈವಾಡ ಇದ್ದು , ಲಂಕೇಶ್ ಕೊಲೆ ಆರೋಪಿಗಳನ್ನು ಶೀಘ್ರ ಬಂಧಿಸುವ ಮೂಲಕ ಅವರನ್ನು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ಆನಂದ ಮಿತ್ತಬೈಲು ಹೇಳಿದರು.
ಅವರು ಪುತ್ತೂರು ಬಸ್ ನಿಲ್ದಾಣದ ಬಳಿ ಬುಧವಾರ ಸಂಜೆ ಎಸ್‍ಡಿಪಿಐ ಪುತ್ತೂರು ವಿದಾನಸಬಾ ಕ್ಷೆತ್ರ ಸಮಿತಿ ವತಿಯಿಂದ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ವಿಚಾರವಾದಿಗಳಾದ ದಾಬೋಲ್ಕರ್, ಪನ್ಸಾರೆ, ಡಾ. ಎಂ ಎಂ ಕಲ್ಬುರ್ಗಿ ಯವರನ್ನು ಇದೇ ರೀತಿಯಲ್ಲಿ ಕೊಲೆ ಮಾಡಲಾಗಿದೆ. ದಾಬೋಲ್ಕರ್ ಹತ್ಯೆ ಹಿಂದೆ ಸನಾತನ ಸಂಸ್ಥೆ ಕೈವಾಡ ಇತ್ತು. ಕೇಂದ್ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂಧ ಬಳಿಕ ವಿಚಾರವಾದಿಗಳ ಹತ್ಯೆ , ಸಾಹಿತಿಗಳ ಹತ್ಯೆ ನಿರಂತರವಾಗಿ ನಡೆಯುತ್ತಿದೆ. ಸಂಘಪರಿವಾರದ ಜನವಿರೋಧಿ ನೀತಿಗಳ ವಿರುದ್ದ ಜನ ಆಕ್ರೋಶಗೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಇವರಿಗೆ ತಕ್ಕ ಪಾಠ ಕಲಿಸುವ ದೂರವಿಲ್ಲ.
ಸಂವಿಧಾನದ ಮೇಲೆ ನಂಬಿಕೆ ಇಲ್ಲದ ದ್ರೋಹಿಗಳು ದೇವರು , ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಅಸಾಂತಿಗೆ ಕಾರಣವಾಗುತ್ತಿದ್ದಾರೆ. ಧರ್ಮದ ಅನಾಚಾರದ ವಿರುದ್ದ ಧ್ವನಿ ಎತ್ತಿದವರನ್ನು ಕೊಲೆ ಮಾಡುವ ಹೀನ ಸಂಸ್ಕಾರವನ್ನು ಮುಂದುವರೆಸುತ್ತಿದ್ದಾರೆ. ಗೌರಿ ಲಂಕೇಶ್ ರವರನ್ನು ಕೊಂದಿರಬಹುದು ಆದರೆ ಅವರ ವಿಚಾರಧಾರೆಯನ್ನು ಕೊಲ್ಲುವುದಕ್ಕೆ ಸಾಧ್ಯವಿಲ್ಲ, ನಾವು ಸಾವಿರ ಗೌರಿ ಲಂಕೇಶರನ್ನು ಸಮಾಜಕ್ಕೆ ಅರ್ಪಣೆ ಮಾಡಲಿದ್ದೇವೆ. ಸರಕಾರ ಎಲ್ಲಾ ಸಾಹಿತಿಗಳ ಕೊಲೆ ಮಾಡಿರುವ ಪ್ರಕರಣವನ್ನು ಬೇದಿಸಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಎಸ್‍ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮಾತನಾಡಿ ಗೌರಿ ಲಂಕೇಶ್ ಹತ್ಯೆ ಹಿಂದೆ ಸಂಘಪರಿವಾರದ ಕೈವಾಡ ಇದೆ, ಕಲ್ಬುರ್ಗಿಯನ್ನು ಕೊಂದವರಿಂದಲೇ ಗೌರಿಯ ಹತ್ಯೆ ನಡೆದಿದೆ, ಸರಕಾರ, ಪೊಲೀಸ್ ಇಲಾಖೆ ಸಂಘಪರಿವಾರದ ನಾಯಕರನ್ನು ಬಂಧಿಸಿದ್ದಲ್ಲಿ ಎಲ್ಲಾ ಕೊಲೆ ಪ್ರಕರಣದ ಮಾಹಿತಿ ಮತ್ತು ಕೊಲೆಗಾರನನ್ನು ಪತ್ತೆ ಮಾಡಬಹುದು. ಓರ್ವ ಮಹಿಳಾ ಪತ್ರಕರ್ತೆಯನ್ನು ಹತ್ಯೆ ಮಾಡುವ ಹೇಡಿಗಳು ಸಮಾಜದ್ರೋಹಿಗಳು ಎಂದು ಹೇಳಿದರು. ಸರಕಾರ ಎಲ್ಲಾ ವಿಚಾರವಾದಿಗಳಿಗೆ ಸೂಕ್ತ ರಕ್ಷಣೆಯನ್ನು ನೀಡಬೇಕು, ರಕ್ಷಣೆ ಬೇಡ ಎಂದು ಹೇಳಿದರು ಮುಂದಿನ ದಿನಗಳಲ್ಲಿ ಯಾವುದೇ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ವಿಚಾರವಾದಿಗಳಿಗೆ, ಪ್ರಗತಿಪರ ಚಿಂತಕರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಅನೆಯನ್ನುದ್ದೇಶಿಸಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಿದ್ದಿಕ್ ಪುತ್ತೂರು, ಪಿಎಫ್‍ಐ ರಾಜ್ಯ ಸಮಿತಿ ಸದಸ್ಯ ಇಕ್ಬಾಲ್ ಬೆಳ್ಳಾರೆ, ಪಿಎಫ್‍ಐ ಪುತ್ತೂರು ಜಿಲ್ಲಾಧ್ಯಕ್ಷ ರಿಝ್ವಾನ್, ಅಶ್ರಫ್ ಬಾವು, ಮೊದಲಾದವರು ಮಾತನಾಡಿ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿದರು ಮತ್ತು ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿದರು.
ಎಸ್‍ಡಿಪಿಐ ತಾಲೂಕು ಕಾರ್ಯದರ್ಶಿ ಜಾಬಿರ್ ಅರಿಯಡ್ಕ ಸ್ವಾಗತಿಸಿ, ಉಸ್ಮಾನ್ ವಂದಿಸಿದರು







