ಗೌರಿ ಲಂಕೇಶ್ ಹತ್ಯೆ: ಜಿಲ್ಲಾ ಪ್ರೆಸ್‍ಕ್ಲಬ್ ಖಂಡನೆ

ಚಿಕ್ಕಮಗಳೂರು, ಸೆ.6:ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿರುವ ಚಿಕ್ಕಮಗಳೂರು ಪ್ರೆಸ್‍ಕ್ಲಬ್ ಪದಧಿಕಾರಿಗಳು ಆರೋಪಿಗಳನ್ನು ಅತೀ ಶೀಘ್ರದಲ್ಲಿ ಪತ್ತೆ ಹಚ್ಚಿ ಬಂಧಿಸುವಂತೆ ಒತ್ತಾಯಿಸಿ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿಯನ್ನು ಬುಧವಾರ ಸಲ್ಲಿಸಿದರು.
ದಿಟ್ಟತನದ ಪತ್ರಕರ್ತೆ, ಸಾಮಾಜಿಕ ಜನಪರ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಅತ್ಯಂತ ಹೇಯ ಮತ್ತು ಪೈಶಾಚಿಕ ಕೃತ್ಯವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಪುಡಾರಿಗಳು ಷಡ್ಯಂತ್ರ ಹೆಣೆದಿರುವುದಕ್ಕೆ ಗೌರಿ ಲಂಕೇಶ್ ಬಲಿಯಾಗಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಧಮನವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ತತ್ವ, ಸಿದ್ಧಾಂತ, ವೈಚಾರಿಕ ನಿಲುಗಳಲ್ಲಿ ಭಿನ್ನಾಭಿಪ್ರಾಯವಿದ್ದರೆ ಅದನ್ನು ಬಗೆಹರಿಸಿಕೊಂಡು ಬದುಕಬೇಕು. ಬಂದೂಕು ಎಲ್ಲದಕ್ಕೂ ಪರಿಹಾರವಲ್ಲ. ಬಂದೂಕಿನ ಹೊರತಾಗಿ ಬೇರೆ ದಾರಿಗಳಿವೆ. ಈ ಪ್ರಕರಣವನ್ನು ಉನ್ನತ ತನಿಖೆಗೆ ಒಪ್ಪಿಸಿ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರೆಸ್‍ಕ್ಲಬ್‍ನ ಅಧ್ಯಕ್ಷ ದಿನೆಶ್ ಪಟವರ್ಧನ್, ಪ್ರಧಾನ ಕಾರ್ಯದರ್ಶಿ ಆರ್.ತಾರಾನಾಥ್, ಚಂದ್ರಪ್ಪ, ಎನ್.ಪ್ರಸನ್ನ, ಉಮೇಶ್ ಕುಮಾರ್, ಜಿ.ಎನ್.ಸಂದೇಶ್, ಡಿ.ನಳೀನಿ, ಮತ್ತಿತರರಿದ್ದರು.







