ಗೌರಿ ಲಂಕೇಶ್ ಹತ್ಯೆ: ಹಂತಕರನ್ನು ಬಂಧಿಸುವಂತೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಗ್ರಹ

ಸೊರಬ, ಸೆ.6: ಪತ್ರಕರ್ತೆ, ಪ್ರಗತಿಪರ ಚಿಂತಕಿ, ಸಾಹಿತಿ ಗೌರಿ ಲಂಕೇಶ್‍ರವರನ್ನು ಹತ್ಯೆಗೈದ ಹಂತಕರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ತಹಶೀಲ್ದಾರ್ ಎಲ್.ಬಿ.ಚಂದ್ರಶೇಖರ್ ಮೂಲಕ ರಾಜ್ಯಪಾಲಕರಿಗೆ ಮನವಿ ಸಲ್ಲಿಸಲಾಯಿತು.
ಪತ್ರಕರ್ತರು ಹಾಗೂ ಪ್ರಗತಿಪರ ಚಿಂತಕರು ಇತ್ತೀಚಿನ ದಿನಗಳಲ್ಲಿ ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗದ ವಾತಾವರಣ ನಿರ್ಮಾಣಗೊಂಡಿದೆ. ಚಿಂತಕ ಹಾಗೂ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿಯವರು ಹತ್ಯೆಯಾಗಿ ಎರಡು ವರ್ಷ ಕಳೆಯುವುದರಲ್ಲಿಯೇ ಗೌರಿ ಲಂಕೇಶ್‍ರವರ ಹತ್ಯೆಯಾಗಿರುವುದು ಖಂಡನೀಯ, ತಕ್ಷಣ ಹಂತಕರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕೂಡಲೇ ಘಟನೆಗೆ ಸಂಬಂಧಿಸಿದ ತಪ್ಪಿತಸ್ಥ ಹಂತಕರನ್ನು ಬಂಧಿಸುವುದರ ಮೂಲಕ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪತ್ರಕರ್ತರು ಹಾಗೂ ವಿಚಾರವಾದಿಗಳು ಮುಕ್ತವಾಗಿ ಸಮಾಜದಲ್ಲಿ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಆಗ್ರಹಿಸುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಮುಂಭಾಗದಿಂದ ಮುಖ್ಯರಸ್ಥೆಯ ಮಾರ್ಗವಾಗಿ ಕಪ್ಪುಪಟ್ಟಿ ಧರಿಸಿ, ಮೌನ ಪ್ರತಿಭಟನೆ ನಡೆಸಿ, ನಂತರ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಹಂತಕರ ಬಂಧನಕ್ಕೆ ಆಗ್ರಹಿಸಿ ಮನವಿಯನ್ನು ತಹಶೀಲ್ದಾರರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ನಟರಾಜ್, ಪತ್ರಕರ್ತರಾದ ಮುಹಮ್ಮದ್ ಆರೀಫ್, ಮಹೇಶ ಗೋಖಲೆ, ರಾಜೇದ್ರ ಜೈನ್, ಶಿವಪ್ಪ ಹಿತ್ಲರ್, ಚಂದ್ರಪ್ಪ, ತೋಟಪ್ಪ, ನೋಪಿಶಂಕರ್, ಎಚ್.ಕೆ.ಬಿ.ಸ್ವಾಮಿ, ನಾಗರಾಜ್ ಜೈನ್, ನೀಲೇಶ್ ಸಮನಿ, ರಾಘವೇಂದ್ರ, ರಾಮಚಂದ್ರಪ್ಪ, ರಾಘವೇದ್ರ ಬಾಪಟ್, ಕಲ್ಲಂಬಿ ರವಿ, ರಂಗಸ್ವಾಮಿ, ಶ್ರೀಪಾದ ಬಿಚ್ಚುಗತ್ತಿ ಮತ್ತಿತರರಿದ್ದರು.







