ಗೌರಿ ಲಂಕೇಶ್ ರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ತೀವ್ರ ಆತಂಕಕ್ಕೆ ಕಾರಣ: ಎಚ್.ಬಿ.ರಾಘವೇಂದ್ರ
.jpg)
ಸಾಗರ, ಸೆ.6: ಬಹುತ್ವದ ನೆಲೆಯಲ್ಲಿ ಸಾಮರಸ್ಯ ಸಮಾಜ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಪತ್ರಕರ್ತೆಯಾಗಿ, ಚಿಂತಕಿಯಾಗಿ ಬರವಣಿಗೆ ಮತ್ತು ಹೋರಾಟದಲ್ಲಿ ತೊಡಗಿಕೊಂಡಿದ್ದ ಗೌರಿ ಲಂಕೇಶ್ ಅವರ ಹತ್ಯೆ ಹಿಂದೆ ಕೆಲವು ಭೂತಮುಖೀಗಳು ದೇಶದಲ್ಲಿ ಅರಾಜಗರಕತೆ ಸೃಷ್ಟಿಸಿ, ಅಟ್ಟಹಾಸ ಮೆರೆಯುವ ಸಂಚು ಅಡಿಗಿದೆ ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಬಿ.ರಾಘವೇಂದ್ರ ತಿಳಿಸಿದರು.
ಇಲ್ಲಿನ ತಾಲೂಕು ಪತ್ರಕರ್ತರ ಸಂಘ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬುಧವಾರ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಇತ್ತೀಚಿನ ವರ್ಷಗಳಲ್ಲಿ ವೈಚಾರಿಕ ನೆಲಗಟ್ಟಿನಲ್ಲಿ ತಮ್ಮ ವಿಚಾರಧಾರೆಗಳನ್ನು ಮಂಡಿಸುವವರನ್ನು ಹತ್ಯೆ ಮಾಡಲಾಗುತ್ತಿದೆ. ಎಂ.ಎಂ.ಕಲಬುರ್ಗಿ, ಗೋವಿಂ ಪನ್ಸಾರೆ, ನರೇಂದ್ರ ದಾಭೋಲ್ಕರ್ ನಂತರ ಈಗ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಮನೆಗೆ ನುಗ್ಗಿ ಹತ್ಯೆ ಮಾಡುತ್ತಿರುವುದರ ವಿರುದ್ಧ ನಾವು ಸುಮ್ಮನೆ ಕುಳಿತುಕೊಳ್ಳಬಾರದು. ನಮ್ಮ ಹಂತದಲ್ಲಿ ಇದನ್ನು ವಿರೋಧಿಸಿ, ಅಕ್ಕಪಕ್ಕದ ಸಮಾನಮನಸ್ಕರನ್ನು ಸೇರಿಸಿ ಇಂತಹ ದುಷ್ಟಶಕ್ತಿಗಳ ವಿರುದ್ಧ ಹೋರಾಟ ಮಾಡುವ ಜಾಗೃತಿ ಮೂಡಿಸಬೇಕು ಎಂದರು.
ಸಾಹಿತಿ ಡಾ. ನಾ.ಡಿಸೋಜ ಮಾತನಾಡಿ, ದೇಶದಲ್ಲಿ ಸತ್ಯ ಮಾತನಾಡುವವರನ್ನು, ನೇರವಾಗಿ ಬರೆಯುವವರನ್ನು ಗುರಿಯಾಗಿಸಿಕೊಂಡು, ಅವರನ್ನು ಮಣಿಸುವ ಷಡ್ಯಂತ್ರ ನಡೆಯುತ್ತಿದೆ. ರಾಜ್ಯದಲ್ಲಿ ಕಲ್ಬುರ್ಗಿ ನಂತರ ಗೌರಿ ಲಂಕೇಶ್ ಅವರ ಹತ್ಯೆ ನಡೆದಿದೆ. ರಾಜ್ಯದಲ್ಲಿ ಸರ್ಕಾರ ಇದೆಯಾ ಎನ್ನುವ ಅನುಮಾನ ಕಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಎತ್ತ ಸಾಗುತ್ತಿದೆ ಎನ್ನುವ ಚಿಂತನೆ ಪ್ರತಿಯೊಬ್ಬರನ್ನೂ ಕಾಡದೆ ಇರದು. ತಕ್ಷಣ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಬಗರ್‍ಹುಕುಂ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಹತ್ಯೆಯ ಹಿಂದೆ ಯಾರಿದ್ದಾರೆ ಎಂದು ಗೊತ್ತಿಲ್ಲ. ಆದರೆ ಹತ್ಯೆಯ ಹಿಂದೆ ಕೋಮುವಾದಿ ಶಕ್ತಿಗಳ ಪಾತ್ರ ಇದೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ. ಕೋಮುವಾದಿ, ಮತಾಂಧಶಕ್ತಿಗಳು ವಿಜೃಂಭಿಸುತ್ತದೆ. ಯಾವುದೆ ಧರ್ಮದವರೂ ಇಂತಹವರಿಗೆ ಪ್ರೋತ್ಸಾಹ ನೀಡಬಾರದು. ಅನ್ಯಾಯದ ವಿರುದ್ಧ ಧ್ವನಿ ಎತ್ತಿರುವ ಗೌರಿ ಲಂಕೇಶ್‍ರಂತಹ ಚಿಂತಕರನ್ನು ಹತ್ಯೆ ಮಾಡುವ ಮೂಲಕ ಭಯದ ವಾತಾವರಣ ನಿರ್ಮಾಣ ಮಾಡುತ್ತಿರುವುದು ಖಂಡನೀಯ ಎಂದರು.
ಸ್ಪಂದನ ರಂಗ ಸಂಸ್ಥೆಯ ಪ್ರತಿಭಾ ರಾಘವೇಂದ್ರ ಮಾತನಾಡಿ, ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಎಂ.ಎಂ.ಕಲುಬುರ್ಗಿ, ಗೌರಿ ಲಂಕೇಶ್ ಅಂತಹ ವೈಚಾರಿಕ ಚಿಂತಕರ ಹತ್ಯೆ ಹಿಟ್ಲರ್ ಸಂಸ್ಕೃತಿ ಪ್ರತಿಷ್ಠಾಪಿಸುವ ಸಂಚಿನ ಭಾಗವಾಗಿದೆ. ನಾವು ಸತ್ಯ ಹೇಳಿ ಬದುಕೋಣ. ಗೌರಿ ಲಂಕೇಶ್ ಅವರ ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸುವ ತನಕ ನಮ್ಮ ಹೋರಾಟ ನಿರಂತರವಾಗಿರಬೇಕು ಎಂದರು.
ಸಭೆಯನ್ನು ಉದ್ದೇಶಿಸಿ ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ಹಿತಕರ ಜೈನ್, ದಲಿತ ಸಂಘರ್ಷ ಸಮಿತಿಯ ಪರಮೇಶ್ವರ ದೂಗೂರು, ಜಮಾತೆ ಇಸ್ಲಾಂನ ರಿಯಾಜುದ್ದೀನ್, ನಗರಸಭೆ ಅಧ್ಯಕ್ಷೆ ಬೀಬಿ ಫಸಿಹಾ, ಸದಸ್ಯೆ ನಾದೀರಾ, ಭೀಮನಕೋಣೆ ಚರಕ ಸಂಸ್ಥೆಯ ಭಾಗಿರಥಿ ಇನ್ನಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಣಪತಿ ಶಿರಳಿಗೆ, ಉಪಾಧ್ಯಕ್ಷ ರವಿನಾಯ್ಡು, ಖಜಾಂಚಿ ಎಂ.ಜಿ.ರಾಘವೇಂದ್ರ, ಇಮ್ರಾನ್ ಸಾಗರ್, ನಗರಸಭಾ ಸದಸ್ಯೆ ಪರಿಮಳ, ಪ್ರಮುಖರಾದ ಅಶ್ವಿನಿಕುಮಾರ್, ರವಿ ಕುಗ್ವೆ, ಅಖಿಲೇಶ್ ಚಿಪ್ಪಳಿ, ಎಸ್.ಲಿಂಗರಾಜ್, ಶಿರವಂತೆ ಚಂದ್ರಶೇಖರ್,ಇಂದಿರಾ ಮೋಹನ್ ಹೆಗಡೆ, ಚೂಡಾಮಣಿ ರಾಮಚಂದ್ರ, ಲಕ್ಷ್ಮಣ ಸಾಗರ್, ಕಲಸೆ ಚಂದ್ರಪ್ಪ, ಸಾಂಶಿ ಪ್ರಭಾಕರ್, ರುದ್ರಪ್ಪ, ರಾಜೇಂದ್ರ ಬಂದಗದ್ದೆ, ಮಹ್ಮದ್ ಜಕ್ರಿಯ, ಮಹಾಬಲ ಕೌತಿ ಇನ್ನಿತರರು ಹಾಜರಿದ್ದರು.







