ವಿಶ್ವಾದ್ಯಂತ ನಲ್ಲಿ ನೀರಿನಲ್ಲಿ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಪತ್ತೆ
ಅಧ್ಯಯನದಿಂದ ಬೆಳಕಿಗೆ

ಹೊಸದಿಲ್ಲಿ,ಸೆ.6: ವಿಶ್ವಾದ್ಯಂತ ನಲ್ಲಿನೀರಿನಲ್ಲಿ ಸೂಕ್ಷ್ಮ ಪ್ಲಾಸ್ಟಿಕ್ ಕಣ(ಮೈಕ್ರೋಪ್ಲಾಸ್ಟಿಕ್) ಗಳು ಸೇರಿಕೊಂಡಿದ್ದು, ದಿಲ್ಲಿಯಲ್ಲಿ ಸಮೀಕ್ಷೆಗೊಳಪಡಿಸಲಾದ ಶೇ.82ರಷ್ಟು ನೀರಿನ ಮಾದರಿಗಳು ಗಾತ್ರದಲ್ಲಿ ಐದು ಮಿ.ಮೀ.ಗಿಂತ ಚಿಕ್ಕದಾದ ಪ್ಲಾಸ್ಟಿಕ್ ಕಣಗಳಿಂದ ಕಲುಷಿತ ಗೊಂಡಿವೆ ಎಂದು ಆರ್ಬ್ ಮೀಡಿಯಾದ ಅಧ್ಯಯನ ವರದಿಯು ತಿಳಿಸಿದೆ. ಅದು ಸಮೀಕ್ಷೆಗಾಗಿ ಡಝನ್‌ಗೂ ಅಧಿಕ ರಾಷ್ಟ್ರಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಿತ್ತು.
ಮೈಕ್ರೋಪ್ಲಾಸ್ಟಿಕ್ ಕಣಗಳು ಅನಾರೋಗ್ಯವನ್ನುಂಟು ಮಾಡುವ ವಿಷಕಾರಿ ರಾಸಾಯ ನಿಕಗಳನ್ನು ಹೀರಿಕೊಳ್ಳುತ್ತವೆ ಮತ್ತು ಮೀನು ಹಾಗೂ ಸಸ್ತನಿಗಳು ಕಲುಷಿತ ನೀರನ್ನು ಸೇವಿಸಿದಾಗ ಈ ರಾಸಾಯನಿಕಗಳನ್ನು ಬಿಡುಗಡೆಗೊಳಿಸುತ್ತವೆ ಎಂದು ಅಧ್ಯಯನವು ತೋರಿಸಿದೆ.
ಬಟ್ಟೆಗಳು, ಸೋಫಾ ಇತ್ಯಾದಿಗಳ ಹೊದಿಕೆಗಳು ಮತ್ತು ಕಾರ್ಪೆಟ್‌ಗಳ ದೈನಂದಿನ ಸವೆತದಲ್ಲಿ ಈ ಸೂಕ್ಷ್ಮಪ್ಲಾಸ್ಟಿಕ್ ಕಣಗಳು ಉತ್ಪತ್ತಿಯಾಗುತ್ತಿರಬಹುದು ಮತ್ತು ಸ್ಥಳೀಯ ನೀರಿನ ಮೂಲಗಳನ್ನು ಅಥವಾ ಜಲ ಸಂಸ್ಕರಣೆ ಅಥವಾ ನೀರು ಪೂರೈಕೆ ವ್ಯವಸ್ಥೆಯನ್ನು ಕಲುಷಿತಗೊಳಿಸುವ ಮೂಲಕ ಮನೆಗಳ ನಲ್ಲಿಗಳನ್ನೂ ತಲುಪುತ್ತವೆ. ಆದರೆ ಇದನ್ನು ತಡೆಯಲು ಯಾವದೇ ನಿರ್ದಿಷ್ಟ ವಿಧಾನಗಳಿಲ್ಲ ಎಂದು ಅಧ್ಯಯನ ವರದಿಯು ಹೇಳಿದೆ.
ಆಹಾರ ಮತ್ತು ನೀರಿನಲ್ಲಿ ಪ್ಲಾಸ್ಟಿಕ್ ಅಂಶದ ಸುರಕ್ಷತಾ ಮಿತಿಯ ಬಗ್ಗೆ ವಿಶ್ವಾದ್ಯಂತ ಸರಕಾರಗಳು ಯಾವುದೇ ಮಾನದಂಡಗಳನ್ನು ಹೊಂದಿಲ್ಲ. ಮಾನವರ ಆರೋಗ್ಯದ ಮೇಲೆ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಬೀರುವ ಪರಿಣಾಮಗಳ ಕುರಿತು ಮೊದಲ ಅಧ್ಯಯನ ಗಳು ಈಗಷ್ಟೇ ಆರಂಭಗೊಂಡಿವೆ ಎಂದು ವರದಿಯು ತಿಳಿಸಿದೆ.
ಮೈಕ್ರೋಪ್ಲಾಸ್ಟಿಕ್‌ನಿಂದ ನೀರು ಕಲುಷಿತಗೊಳ್ಳುವ ರಾಷ್ಟ್ರಗಳ ಪೈಕಿ ಅಮೆರಿಕ ಅಗ್ರಸ್ಥಾನದಲ್ಲಿದೆ(ಶೇ.94). ನಂತರದ ಸ್ಥಾನಗಳಲ್ಲಿ ಲೆಬನಾನ್ ಮತ್ತು ಭಾರತ ಇವೆ. ಐರೋಪ್ಯ ರಾಷ್ಟ್ರಗಳಲ್ಲಿ ಈ ಮಾಲಿನ್ಯ ಅತ್ಯಂತ ಕಡಿಮೆ ಪ್ರಮಾಣ(ಶೇ.72)ದಲ್ಲಿದೆ ಎನ್ನುವದು ಅಧ್ಯಯನದಿಂದ ಬೆಳಕಿಗೆ ಬಂದಿದೆ.
ಭಾರತದಲ್ಲಿ 13 ಕೋಟಿಗೂ ಹೆಚ್ಚಿನ ಜನರು ಅಂತರ್ಜಲವು ಕಲುಷಿತಗೊಂಡಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರ್ಲ್ಡ್ ರಿಸೋರ್ಸ್‌ಸ್ ಇನ್‌ಸ್ಟಿಟ್ಯೂಟ್ ಹೇಳಿದೆ. ಸುರಕ್ಷತಾ ಮಿತಿಯನ್ನು ಮೀರಿ ಕನಿಷ್ಠ ಮೂರು ಮಾಲಿನ್ಯಕಾರಕಗಳನ್ನು ಒಳಗೊಂಡಿರುವ ನೀರು ಪೂರೈಕೆಯಾಗುತ್ತಿರುವ ಪ್ರದೇಶಗಳಲ್ಲಿ 20 ಕೋಟಿಗೂ ಅಧಿಕ ಜನರು ವಾಸವಾಗಿದ್ದಾರೆ ಎಂದು ಅದರ ವಿಶ್ಲೇಷಣೆಯು ತಿಳಿಸಿದೆ.







