ಮಳೆನೀರು ಕೊಯ್ಲು ಪದ್ಧತಿ ಅನುಸರಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು: ಎಂ.ಎ.ನಾಗೇಂದ್ರ

ಚಿಕ್ಕಮಗಳೂರು, ಸೆ.6: ನೀರಿನ ಅಭಾವ ಸೃಷ್ಟಯಾಗಿರುವ ಈ ಸಂದರ್ಭದಲ್ಲಿ ಮಳೆನೀರು ಕೊಯ್ಲು ಪದ್ಧತಿ ಅನುಸರಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯತೆ ಇದೆ ಎಂದು ಚಿಕ್ಕಮಗಳೂರು ಸಿವಿಲ್ ಇಂಜಿನಿಯರಿಂಗ್ ಸಂಘದ ಮಾಜಿ ಅಧ್ಯಕ್ಷ ಎಂ.ಎ. ನಾಗೇಂದ್ರ ಹೇಳಿದರು.
ಅವರು ನಗರದ ಕ್ಯಾಥೋಲಿಕ್ ಕ್ಲಬ್‍ನಲ್ಲಿ ನಡೆದ ಸಿವಿಲ್ ಇಂಜಿನಿಯರ್ಸ್ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಇಂಜಿನಿಯರುಗಳಿಗೆ ಕಟ್ಟಡ ನಿರ್ಮಾಣವೊಂದೇ ಗುರಿಯಾಗಬಾರದು, ಸಾಮಾಜಿಕ ಕಳಕಳಿ ಇರಬೇಕು. ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡುವಾಗ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸುವುದು ಕಡ್ಡಾಯ ಎಂಬ ನಿಬಂಧನೆಯನ್ನು ನಗರಸಭೆ ಜಾರಿಗೊಳಿಸುವಂತೆ ಇಂಜಿನಿಯರ್ಸ್ ಸಂಘ ಮನವಿ ಮಾಡಿದೆ. ಕಟ್ಟಡ ನಿರ್ಮಾಣದ ಸಂದರ್ಭ ಮಳೆ ನೀರು ಕೊಯ್ಲು ಪದ್ಧತಿಯನ್ನು ಅನುಷ್ಠಾನಗೊಳಿಸುವಂತೆ ಕಟ್ಟಡದ ಮಾಲಕರುಗಳಿಗೆ ಇಂಜಿನಿಯರ್ ಮನವೊಲಿಸಬೇಕೆಂದು ಮನವಿ ಮಾಡಿದರು.
ಕಟ್ಟಡ ನಿರ್ಮಾಣಕ್ಕೆ ಅಗತ್ಯವಾದ ವಸ್ತುಗಳ ಬಳಕೆ ಕುರಿತು ಈ ಹಿಂದೆ ಇದ್ದ ಕಮಿಟಿ ವಸ್ತು ಪ್ರದರ್ಶನವೊಂದನ್ನು ವ್ಯವಸ್ಥೆ ಮಾಡಿದ್ದು ಮುಂದಿನ ಹೊಸ ಕಮಿಟಿ ಮನೆ ನಿರ್ಮಾಣದ ವೇಳೆ ಪ್ರತಿಯೊಬ್ಬರೂ ಮಳೆನೀರು ಕೊಯ್ಲು ಪದ್ದತಿಯನ್ನು ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಲು ನಗರದಲ್ಲಿ ಸಾರ್ವಜನಿಕರಿಗಾಗಿ ಒಂದು ವಿಚಾರ ಸಂಕಿರಣ ಹಮ್ಮಿಕೊಳ್ಳುವಂತೆ ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಿವಿಲ್ ಇಂಜಿನಿಯರ್ಸ್ ಸಂಘದ ಅಧ್ಯಕ್ಷ ಎಂ.ಎಸ್. ಮಹೇಶ್ ಮಾತನಾಡಿ, ಕಳೆದ ಒಂದು ವರ್ಷದ ಅವಧಿಯಲ್ಲಿ ನಿಮ್ಮೆಲ್ಲರ ಸಲಹೆ, ಸಹಕಾರದಿಂದ ಹಲವು ಕಾರ್ಯಕ್ರಮ ನಡೆಸಿದ್ದು, ಮುಂದಿನ ಅಧ್ಯಕ್ಷರ ಅವಧಿಯಲ್ಲಿ ಕೈಗೊಳ್ಳುವ ಸಮಾಜಮುಖಿ ಕಾರ್ಯಕ್ರಮಗಳಿಗೆ ತಮ್ಮ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಈ ವೇಳೆ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಗರದ ಎಐಟಿ ಕಾಲೇಜಿನ ಉಪಾಧ್ಯಕ್ಷರಾದ ಪ್ರೊ. ಹೇಮಂತ ಪ್ರಭು, ಪ್ರೊ.ಡಾ. ರಾಮೇಗೌಡ, ಪ್ರೊ. ಗೋವಿಂದೇಗೌಡ ಹಾಗೂ ಪಾಲಿಟೆಕ್ನಿಕ್‍ನ ಉಪನ್ಯಾಸಕ ಎಂ.ಎಸ್. ಸುರೇಶ್ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಸಂಘದ ಕಾರ್ಯದರ್ಶಿ ಗುರುಮೂರ್ತಿ ವರದಿ ಮಂಡಿಸಿದರೆ, ಖಜಾಂಚಿ ಮಲ್ಲಿಕಾರ್ಜುನ ಲೆಕ್ಕಪತ್ರ ಮಂಡಿಸಿದರು. ಆನಂದ್ ಸ್ವಾಗತಿಸಿದರು. ಶ್ರೀಕಾಂತ್ ವಂದಿಸಿದರು. ಜಿ. ರಮೇಶ್ ನಿರೂಪಿಸಿದರು. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.







