ಕಲಾವಿದ ಪ್ರಕಾಶ್ ರೈಗೆ ‘ಕಾರಂತ ಹುಟ್ಟೂರ ಪ್ರಶಸ್ತಿ’

ಉಡುಪಿ, ಸೆ.6: ಕೋಟತಟ್ಟು ಗ್ರಾಪಂ ಕೋಟ, ಡಾ.ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಕಳೆದ 12 ವರ್ಷಗಳಿಂದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಕೋಟ ಶಿವರಾಮ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡುತ್ತಿರುವ ‘ಡಾ.ಕಾರಂತ ಹುಟ್ಟೂರ ಪ್ರಶಸ್ತಿ’ಗೆ ಈ ಬಾರಿ ಸೃಜನಶೀಲ ವ್ಯಕ್ತಿತ್ವದ ಕಲಾವಿದ ಹಾಗೂ ಬಹುಮುಖ ಪ್ರತಿಭೆಯ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಲಾಗಿದೆ.
ಬುಧವಾರ ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಕೋಟದ ಡಾ. ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್ ಅವರು ಈ ವಿಷಯ ಪ್ರಕಟಿಸಿದರು.
ಪ್ರಕಾಶ್ ರೈ ಅವರು ರಂಗಕಲಾವಿದ, ಬಹುಭಾಷಾ ಚಲನಚಿತ್ರ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಜನಪ್ರಿಯತೆ ಗಳಿಸಿರುವುದಲ್ಲದೇ, ಸಾಂಸ್ಕೃತಿಕ- ಸಾಹಿತ್ಯಿಕ ಚಿಂತಕರಾಗಿರುವ ಹೆಸರು ಮಾಡಿದ್ದಾರೆ. 2017ನೇ ಸಾಲಿನ ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಪ್ರಶಸ್ತಿ ಆಯ್ಕೆ ಸಮಿತಿ ಪ್ರಕಾಶ್‌ರಾಜ್ ಅವರ ಹೆಸರನ್ನು ಆಯ್ಕೆ ಮಾಡಿದೆ ಎಂದವರು ತಿಳಿಸಿದರು.
ಬರುವ ಅ.10ರಂದು ಡಾ.ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬದ ದಿನದಂದು ಕೋಟದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಕಾಶ್ ರೈ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದವರು ತಿಳಿಸಿದರು.
ಈ ಬಾರಿ ಕಾರಂತ ಜನ್ಮದಿನೋತ್ಸವದ ಅಂಗವಾಗಿ ಅ.1ರಿಂದ 10ರವರೆಗೆ ಹತ್ತು ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸುಗ್ಗಿ ‘ತಂಬೆಲರು-2017’ನ್ನು ಕೋಟದ ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಿವಿಧ ಸಮ್ಮೇಳನ, ನಾಟಕ, ಆರೋಗ್ಯ ಮೇಳ, ಶತಕವಿ ಸಮ್ಮೇಳನ, ಚಿಣ್ಣರ ಹಬ್ಬ, ವಿಚಾರಗೋಷ್ಠಿ, ಚಲನಚಿತ್ರ ಪ್ರದರ್ಶನ, ತೆಂಕು-ಬಡಗಿನ ಯಕ್ಷ-ಗಾನ-ನೃತ್ಯ ವೈಭವ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಆನಂದ ಕುಂದರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೋಟತಟ್ಟು ಗ್ರಾಪಂ ಅಧ್ಯಕ್ಷ ಎಚ್.ಪ್ರಮೋದ ಹಂದೆ, ಪ್ರತಿಷ್ಠಾನದ ಮಾಧ್ಯಮ ವಕ್ತಾರ ಅಶ್ವಥ್ ಆಚಾರ್ಯ, ಆಯ್ಕೆ ಸಮಿತಿ ಸದಸ್ಯ ಯು.ಎಸ್.ಶೆಣೈ ಹಾಗೂ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾರ್ಯ ಆಚಾರ್ಯ ಉಪಸ್ಥಿತರಿದ್ದರು.







