ಕರ್ನಾಟಕ ಗ್ರಾಮೀಣ ಬ್ಯಾಂಕುಗಳ ಉದ್ಯೋಗ ಪ್ರವೇಶ ಪರೀಕ್ಷೆಗೆ ತಡೆನೀಡಲು ಕರಾವೆ ಒತ್ತಾಯ
ಉಡುಪಿ, ಸೆ.6: ಇದೇ ತಿಂಗಳ 9,10,16, 23 ಹಾಗೂ 24ರಂದು ಕರ್ನಾಟಕ ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ಸ್ಥಾನಗಳನ್ನು ತುಂಬಲು ಪ್ರವೇಶ ಪರೀಕ್ಷೆಗಳು ನಡೆಯಲಿದ್ದು, ಕೇಂದ್ರ ಸರಕಾರದ ಕುಮ್ಮಕ್ಕಿನಿಂದ ಉದ್ಯೋಗವನ್ನು ಕನ್ನಡಿಗರನ್ನು ತಪ್ಪಿಸಿ ಕನ್ನಡಿಗೇತರರನ್ನು ನೇಮಕ ಮಾಡಲು ಬೃಹತ್ ಹುನ್ನಾರ ನಡೆಯುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಎಸ್.ಆರ್.ಲೋಬೊ ಆರೋಪಿಸಿದ್ದಾರೆ.
ಕರ್ನಾಟಕದ ಮೂರು ಗ್ರಾಮೀಣ ಬ್ಯಾಂಕುಗಳ ಸಾವಿರಾರು ಹುದ್ದೆಗಳಿಗಾಗಿ ನಡೆಯುವ ಈ ಪ್ರವೇಶ ಪರೀಕ್ಷೆಯಲ್ಲಿ ಕನ್ನಡಿಗ ನಿರುದ್ಯೋಗಿಗಳಿಗೆ ದೊರೆಯಬೇಕಿದ್ದ ಹುದ್ದೆಗಳು ಬೇರೆ ರಾಜ್ಯದವರ ಪಾಲಾಗುವ ಭೀತಿ ಇದೆ. ಆದುದರಿಂದ ರಾಜ್ಯ ಸರಕಾರ ತಕ್ಷಣ ಈ ಪರೀಕ್ಷೆಗಳನ್ನು ತಡೆಹಿಡಿಯಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಮನವಿ ಮಾಡಲಾಗುವುದು ಎಂದು ಲೋಬೊ ಬುಧವಾರ ಇಲ್ಲಿ ಕರೆದ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.
ಗ್ರಾಮೀಣ ಬ್ಯಾಂಕುಗಳ ಮೂಲ ಉದ್ದೇಶವೇ ಸಣ್ಣ ಹಣಕಾಸಿನ, ಸ್ಥಳೀಯ ಸೊಗಡಿನ, ಬಡವರ ಪರವಾದ ಗ್ರಾಹಕ ಸ್ನೇಹಿ ಬ್ಯಾಂಕಿಂಗ್ ವ್ಯವಹಾರ ವಾಗಿದ್ದು, ಇದರಂತೆ ದೇಶದಲ್ಲಿ ಒಟ್ಟು 56 ಗ್ರಾಮೀಣ ಬ್ಯಾಂಕ್‌ಗಳಿವೆ. ಕರ್ನಾಟಕ ರಾಜ್ಯದಲ್ಲಿ ಮೂರು ಗ್ರಾಮೀಣ ಬ್ಯಾಂಕುಗಳಿದ್ದು- ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್, ಕಾವೇರಿ ಗ್ರಾಮೀಣ ಬ್ಯಾಂಕ್ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್- ಇವುಗಳ ಒಟ್ಟು ಶಾಖೆಗಳ ಸಂಖ್ಯೆ 1184 ಆಗಿದೆ. ಇದರಲ್ಲಿ ಅಂದಾಜು 8000 ಮಂದಿ ಸಿಬ್ಬಂದಿಗಳು ಕಾರ್ಯನಿರ್ವಹಿಸುತಿದ್ದಾರೆ ಎಂದರು.
ಈ ಗ್ರಾಮೀಣ ಬ್ಯಾಂಕುಗಳ ಹುದ್ದೆಯನ್ನು ಪಡೆಯಲು ಅಭ್ಯರ್ಥಿ ಎಸೆಸೆಲ್ಸಿ ವರೆಗಿನ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ಪಡೆದಿರಬೇಕಿರುವುದು ಕಡ್ಡಾಯವಾಗಿದ್ದು, ಇದರಿಂದ ಆಯ್ಕೆಗೆ ರಾಷ್ಟ್ರೀಕೃತ ಬ್ಯಾಂಕುಗಳಂತೆ ಐಬಿಪಿಎಸ್ ಆಯ್ಕೆ ವಿಧಾನವನ್ನು ಅನುಸರಿಸಿದರೂ ಕನ್ನಡಿಗರಿಗೆ ಬಹುಪಾಲು ಉದ್ಯೋಗ ದೊರಕುತಿದ್ದವು ಎಂದು ಲೋಬೊ ವಿವರಿಸಿದರು.
ಆದರೆ ಕೇಂದ್ರದ ಈಗಿನ ಎನ್‌ಡಿಎ ಸರಕಾರ 2014ರಲ್ಲಿ ಕನ್ನಡವನ್ನು ಹತ್ತನೇ ತರಗತಿಯವರೆಗೆ ಓದಿರಲೇಬೇಕು ಎಂಬ ನಿಯಮವನ್ನು ತೆಗೆದುಹಾಕಿದ್ದು, ಇದರಿಂದ ಹೊರರಾಜ್ಯದವರೂ ಇಲ್ಲಿ ಪ್ರವೇಶ ಪರೀಕ್ಷೆ ಬರೆದು ಕನ್ನಡ ಭಾಷೆ ಬಾರದೇ ಗ್ರಾಮೀಣ ಪ್ರದೇಶದಲ್ಲಿ ಆಯ್ಕೆಯಾಗಬಹುದಾಗಿದೆ. ಇವರು ಆಯ್ಕೆಯಾದ ಆರು ತಿಂಗಳಲ್ಲಿ ಕನ್ನಡ ಕಲಿಯಬೇಕು, ಇಲ್ಲದಿದ್ದರೆ ಇನ್ನೂ ಆರು ತಿಂಗಳು ಅವಕಾಶ ವಿಸ್ತರಿಸಲು ಅವಕಾಶ ನೀಡಲಾಗಿದೆ ಎಂದರು.
ಇದರಿಂದ ಕನ್ನಡಿಗರಿಗೆ ದೊರೆಯುತಿದ್ದ ಉದ್ಯೋಗಾವಕಾಶ ಈಗ ಅನ್ಯ ರಾಜ್ಯದವರ ಪಾಲಾಗುತ್ತಿದೆ.ವಿಶೇಷವಾಗಿ ಹಿಂದಿ ಭಾಷಿಕರಿಗೆ ತಮ್ಮ ಭಾಷೆಯಲ್ಲೇ ಪರೀಕ್ಷೆ ಬರೆಯಲು ಅವಕಾಶವಿದ್ದು, ಅವರೇ ಬಹುಪಾಲು ಉದ್ಯೋಗಗಳನ್ನು ಪಡೆಯುವ ಸಾಧ್ಯತೆ ಇದೆ ಎಂದವರು ಕಳವಳ ವ್ಯಕ್ತಪಡಿಸಿದರು.
ಇದೀಗ 3000 ಹುದ್ದೆಗಳಿಗಾಗಿ ಸೆ.9,10,16,23,24ರಂದು ರಾಜ್ಯದ ಒಟ್ಟು 13 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ರಾಜ್ಯ ಸರಕಾರ ಈ ಪರೀಕ್ಷೆಯನ್ನು ತಡೆ ಹಿಡಿದು 2014ಕ್ಕೂ ಮೊದಲಿದ್ದ ನಿಯಮದಂತೆ 10ನೇ ತರಗತಿಯವರೆಗೆ ಕನ್ನಡವನ್ನು ಭಾಷೆಯಾಗಿ ಕಲಿತರು ಮಾತ್ರ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಬೇಕು ಎಂದವರು ಒತ್ತಾಯಿಸಿದರು.
ಬ್ಯಾಂಕ್ ಹುದ್ದೆಗಾಗಿ ಪರೀಕ್ಷೆಗಾಗಿ ಕನ್ನಡದಲ್ಲಿ ನಡೆಯುವಂತೆ, ಕನ್ನಡ ಮಾಧ್ಯಮದ ಗ್ರಾಮೀಣ ವಿದ್ಯಾರ್ಥಿಗಳಿಗೆ ಹುದ್ದೆಯಲ್ಲಿ ಮೀಸಲಾತಿಯನ್ನು ನೀಡುವಂತೆ ಕರಾವೆ ಒತ್ತಾಯಿಸುತ್ತದೆ ಎಂದ ಅವರು ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರವೇ ಕಾರ್ಯದರ್ಶಿ ಸುದೇಶ್ ಶೇಟ್, ರಫಾಯಲ್ ರಾಜ್ ಉಪಸ್ಥಿತರಿದ್ದರು.







