ತನ್ನ ರಾಜಕಿಯಕ್ಕಾಗಿ ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ: ಶಾಸಕ ಸಿ.ಟಿ.ರವಿ

ಕಡೂರು, ಸೆ. 6: ತನ್ನ ರಾಜಕಿಯಕ್ಕಾಗಿ ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ. ನನ್ನ ಮಾಲಕರು ಈ ಕ್ಷೇತ್ರದ ಮತದಾರರು. ಅವರ ತೀರ್ಮಾನಕ್ಕೆ ತಲೆ ಬಾಗುತ್ತೇನೆಂದು ಶಾಸಕ ಸಿ.ಟಿ. ರವಿ ಹೇಳಿದರು.
ಅವರು ಮಂಗಳವಾರ ರಾತ್ರಿ ತಾಲೂಕಿನ ಜೋಡಿಹೋಚಿಹಳ್ಳಿ ಗ್ರಾಮದಲ್ಲಿ ನಡೆದ ಜನಸ್ಪಂದನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ತಾನು ಮತದಾರರ ಸೇವಕ ಅಷ್ಟೇ, ನಾನು ಎಂದೂ ದ್ವೇಶದ ರಾಜಕಾರಣ ಮತ್ತು ಭಯ ನಿರ್ಮಿತ ರಾಜಕಾರಣ ಮಾಡಿಲ್ಲ. ಪ್ರೀತಿ ವಿಶ್ವಾಸದಿಂದ ರಾಜಕಾರಣ ಮಾಡಿದ್ದೇನೆ. ತಾವು ಯಾವುದೇ ಬೇರೆ ಕ್ಷೇತ್ರಕ್ಕೆ ಹೋಗುವುದಿಲ್ಲ. ಯಾರು ಏನೇ ಹೇಳಿದರು ನನ್ನ ಕೆಲಸವನ್ನು ನಾನು ಮುಂದುವರೆಸುತ್ತೇನೆ. ಮುಂದಿನದು ಜನತೆಗೆ ಬಿಟ್ಟಿದ್ದು. ಎಂದರು.
ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ. ಪ್ರತಿಯೊಬ್ಬರು ಪ್ರಶ್ನೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಅದಕ್ಕೋಸ್ಕರವೇ ಜನಸಂಪರ್ಕ ಸಭೆ ಮತ್ತು ಜನರ ಧನಿಯಾಗಿ ಮತ್ತು ಗ್ರಾಮದ ಸಮಸ್ಯೆಗಳನ್ನು ತಿಳಿಯಲು ಈ ಗ್ರಾಮ ವಾಸ್ತವ್ಯವನ್ನು ಮಾಡಲಾಗುತ್ತಿದೆ. ಗ್ರಾಮಗಳ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳನ್ನು ನಿಮ್ಮತ್ತ ಕರೆ ತರುವುದು ಮತ್ತು ಸ್ವಲ್ಪ ಮಟ್ಟಿಗಾದರೂ ಪರಿಹಾರವನ್ನು ಕಂಡುಕೊಳ್ಳುವುದಾಗಿದ್ದು ಇದನ್ನು ಬಿಟ್ಟು ಕಾಂಗ್ರೆಸ್ ಪಕ್ಷದವರು ಹಳುವಂತೆ ಚುನಾವಣೆಯ ಸಮಯದಲ್ಲಿ ಮಾಡುವ ಮತ ಬ್ಯಾಂಕ್ ರಾಜಕಾರಣ ಅಲ್ಲ ಎಂದರು.
ಜಿಪಂ ಸದಸ್ಯ ವಿಜಯಕುಮಾರ್ ಮಾತನಾಡಿ, ಶಾಸಕರ ಈ ಗ್ರಾಮ ವಾಸ್ತವ್ಯ ಗ್ರಾಮದ ಸಮಸ್ಯೆಗಳನ್ನು ತಿಳಿಯಲು ಮತ್ತು ಅವುಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವುದಾಗಿದ್ದು. ಅದನ್ನು ಬಿಟ್ಟು ವಿರೋಧ ಪಕ್ಷದವರು ಹೇಳುವಂತೆ ಮೋಜು ಮಸ್ತಿಗಲ್ಲ. ಶಾಸಕರ ಗ್ರಾಮ ವಾಸ್ತವ್ಯವನ್ನು ಟೀಕಿಸುವವರು ಗ್ರಾಮ ವಾಸ್ತವ್ಯ ಸಮಯದಲ್ಲಿ ಗ್ರಾಮಕ್ಕೆ ಬಂದು ಖುದ್ದು ನೋಡಿ ತಿಳಿಯಬೇಕು. ಬರೀ ಮಾತನಾಡುವುದೇ ರಾಜಕಾರಣವಲ್ಲ. ಹೋಚಿಹಳ್ಳಿ ಗ್ರಾಪಂ ನಲ್ಲಿ ಹಲವು ಸಮಸ್ಯೆಗಳಿದ್ದು, ಅದರ ಜೊತೆಯಲ್ಲಿ ಅಭಿವೃದ್ಧಿಯೂ ಆಗಿದೆ ಎಂದು ತಿಳಿಸಿದರು.
ಹೋಚಿಹಳ್ಳಿ ಗ್ರಾಮಕ್ಕೆ ಶಾಸಕರು ಅನೇಕ ಅನುದಾನವನ್ನು ನೀಡಿದ್ದು ಅದರಲ್ಲಿ ಓವರ್‍ಹೆಡ್ ಟ್ಯಾಂಕಿಗೆ 25 ಲಕ್ಷ ರೂ., ಕಾಲನಿ ಸಿಸಿ ರಸ್ತೆಗೆ 5 ಲಕ್ಷ ರೂ., ಗೊಲ್ಲರಹಟ್ಟಿ ರಸ್ತೆಗೆ 10 ಲಕ್ಷ ರೂ., ಕರಕಲ್ಲಳ್ಳಿಗೆ 10 ಲಕ್ಷ ರೂ., ದಾಸರಹಳ್ಳಿಗೆ10 ಲಕ್ಷ ರೂ. ಸಿಸಿ ರಸ್ತೆ, ಎಲ್ಲಾ ದೇವಾಲಯಗಳ ಸಮುದಾಯ ಭವನಗಳಿಗೆ ತಲಾ ಒಂದೊಂದು ಲಕ್ಷ ಬಿಡುಗಡೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಜಿಗಣೆಹಳ್ಳಿಮಂಜು, ಎಪಿಎಂಸಿ ಉಪಾಧ್ಯಕ್ಷೆ ಅನುಸೂಯ ಓಂಕಾರಪ್ಪ, ತಹಶೀಲ್ದಾರ್ ಎಂ.ಭಾಗ್ಯ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭು, ಸಮಾಜ ಕಲ್ಯಾಣಧಿಕಾರಿ ಲಕ್ಷ್ಮಣ್, ಪ್ರಭಾರಿ ಉಪತಹಶಿಲ್ದಾರ್ ಬೆಂಕಿರಂಗಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕಿ ಜ್ಯೋತಿಲಕ್ಷ್ಮೀ, ಕೃಷಿ ಇಲಾಖೆಯ ನಿರ್ದೇಶಕ ಶಿವಕುಮಾರ್ ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದರು.
ಸಭೆಯಲ್ಲಿ ಬಿಜೆಪಿ ಮುಖಂಡರಾದ ಚಿಕ್ಕದೇವನೂರು ರವಿ, ಜಿಪಂ ಮಾಜಿ ಅಧ್ಯಕ್ಷ ಕಲ್ಮರುಡಪ್ಪ, ನಿಡಘಟ್ಟದ ಲೊಕೇಶ್, ನಾಗರಾಳು ಗ್ರಾಪಂ ಅಧ್ಯಕ್ಷ ಮನೋರಂಜಿನಿ ರಮೇಶ್, ಗ್ರಾಪಂ ಸದಸ್ಯರಾದ ಕರಿಯಪ್ಪ, ವಿದ್ಯಾಸರಸ್ವತಿ, ಕಲ್ಲೇಶ, ಗೌರಮ್ಮ, ಯತೀಶ, ಉಪಸ್ಥಿತರಿದ್ದರು.







