ನೋಟು ಅಮಾನ್ಯೀಕರಣದಿಂದ ಉಂಟಾದ 577 ಕೋಟಿ ರೂ. ನಷ್ಟ ಭರಿಸಿ
ಆರ್ ಬಿಐಗೆ ಕರೆನ್ಸಿ ಮುದ್ರಣಾಲಯಗಳ ಆಗ್ರಹ

ಹೊಸದಿಲ್ಲಿ, ಸೆ.6: ಸರಕಾರದ ನೋಟು ಮುದ್ರಣಾಲಯಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 577 ಕೋಟಿ ರೂ.ಗಳಷ್ಟು ಪರಿಹಾರಕ್ಕೆ ಬೇಡಿಕೆಯಿರಿಸಿವೆ. ಅದಕ್ಕೆ ಕಾರಣ ಕುತೂಹಲಕಾರಿ. ಕೇಂದ್ರ ಸರಕಾರ ಕಳೆದ ವರ್ಷದ ನವೆಂಬರ್ 8ರಂದು ಘೋಷಿಸಿದ್ದ ನೋಟು ಅಮಾನ್ಯೀಕರಣದಿಂದಾಗಿ ತಮಗುಂಟಾದ ನಷ್ಟವನ್ನು ಭರಿಸುವ ಸಲುವಾಗಿ ಈ ಪರಿಹಾರಕ್ಕೆ ಬೇಡಿಕೆಯಿರಿಸಲಾಗಿದೆ.
ಈಗಾಗಲೇ ರಿಸರ್ವ್ ಬ್ಯಾಂಕ್ ತನ್ನ ವಾರ್ಷಿಕ ವರದಿಯಲ್ಲಿ ಅಮಾನ್ಯೀಕರಣದಿಂದಾಗಿ ಕಡಿಮೆ ಲಾಭ ಗಳಿಸಿರುವ ಬಗ್ಗೆ ಹಾಗೂ ಸರಕಾರಕ್ಕೆ ಕಡಿಮೆ ವಾರ್ಷಿಕ ಲಾಭಾಂಶ ನೀಡಿರುವ ಬಗ್ಗೆ ಹೇಳಿಕೊಂಡಿತ್ತು.
ಆಮದಿತ ಹಾಗೂ ದೇಶೀಯ ಸಂಸ್ಥೆಗಳಿಂದ ಈ ಹಿಂದೆ 1,000 ಹಾಗೂ 500 ಮುಖಬೆಲೆಯ ನೋಟು ತಯಾರಿಸಲೆಂದು ತರಿಸಲಾದ ಭಾರೀ ಸಂಖ್ಯೆಯ ಕರೆನ್ಸಿ ನೋಟ್ ಕಾಗದಗಳಿಂದಾಗಿ ಹಾಗೂ ಅದಾಗಲೇ ಮಾಡಲ್ಪಟ್ಟ ಆರ್ಡರುಗಳಿಂದಾಗಿ ಇಷ್ಟೊಂದು ದೊಡ್ಡ ಮೊತ್ತದ ಬಿಲ್ ತೋರಿಸಲಾಗಿದೆ.
ಪ್ರಸಕ್ತ ದೇಶದಲ್ಲಿ ನಾಲ್ಕು ಕರೆನ್ಸಿ ನೋಟ್ ಮುದ್ರಣಾಲಯಗಳಿದ್ದು, ಆರ್ ಬಿ ಐ ಗೆ ಸಲ್ಲಿಸಲಾದ ಬಿಲ್ಲಿನಲ್ಲಿ ಎಲ್ಲಾ ನಾಲ್ಕು ಮುದ್ರಣಾಲಯಗಳಿಗೂ ಜಂಟಿಯಾಗಿ ಉಂಟಾದ ನಷ್ಟದ ಮೊತ್ತ ಸೂಚಿಸಲಾಗಿತ್ತು.
ಸಾರ್ವಜನಿಕ ರಂಗದ ಸೆಕ್ಯುರಿಟಿ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ಇದರ ಮುದ್ರಣಾಲಯಗಳು ನಾಶಿಕ್ ಹಾಗೂ ದೇವಸ್ ನಲ್ಲಿ ಕಾರ್ಯಾಚರಿಸುತ್ತಿದ್ದರೆ, ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈ. ಲಿ. ಮುದ್ರಣಾಲಯಗಳು ಮೈಸೂರು ಹಾಗೂ ಪಶ್ಚಿಮ ಬಂಗಾಳದ ಸಲ್ಬೋನಿಯಲ್ಲಿ ಕಾರ್ಯಾಚರಿಸುತ್ತಿವೆ.







