ಪುತ್ತೂರು : ನೀರು ಉಳಿಸಿ ಅಭಿಯಾನ

ಪುತ್ತೂರು,ಸೆ.6: ಭಾರತದ ಜೀವನಾಡಿಗಳೆಂದು ಕರೆದುಕೊಳ್ಳುವ ನದಿಗಳು ಇಂದು ಅವನತಿಯತ್ತ ಸಾಗಿವೆ. ಇದೇ ಪರಿಸ್ಥಿತಿ ಮುಂದುವರಿದರೇ ಕೆಲವೇ ವರ್ಷಗಳಲ್ಲಿ ಕುಡಿಯುವ ನೀರಿಗೂ ಮೈಲಿಗಟ್ಟಲೇ ನಡೆಯುವ ಸ್ಥಿತಿ ಈ ಭಾಗದ ಜನರಿಗೂ ಬರಬಹುದು ಎಂದು ಉಜಿರೆಯ ರುಡ್‍ಸೆಟ್‍ನ ತರಬೇತಿದಾರ ಗೌತಮ್ ಹೇಳಿದರು.
ಅವರು ಪುತ್ತೂರು ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ನಡೆದ "ನೀರು ಉಳಿಸಿ ಅಭಿಯಾನ"ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದರು
ಮಾನವ ತಮ್ಮ ಬದುಕನ್ನು ನದಿದಂಡೆಗಳಲ್ಲಿ ಪ್ರಾರಂಭಿಸದರೂ, ಇಂದು ದೇಶದ ಹಲವು ನದಿಗಳು ಕಣ್ಮರೆಯಾಗಿದ್ದು, ಇದರಿಂದ ನೀರಿಗಾಗಿ ಹಾಹಕಾರವೆದ್ದಿದೆ. ನೀರನ್ನು ಉಳಿಸಬೇಕಾದರೇ ಅದರ ಬಗ್ಗೆ ವಿಶಿಷ್ಟವಾದ ಯೋಜನೆಗಳನ್ನು ರೂಪಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಸರಕಾರಕ್ಕೆ ಚುರುಕು ಮುಟ್ಟಿಸಬೇಕಾದ ಅಗತ್ಯವಿದ್ದು, ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಫೌಂಡೇಶನ್ ಸೆ. 3ರಿಂದ ಆ.2ರವರೆಗೆ ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ ನೀರಿಗಾಗಿ ಅಭಿಯಾನ ಪ್ರಾರಂಭಿಸಿದ್ದು, ಆ ಮೂಲಕ ದೇಶದ ಜನರಿಗೆ ನೀರಿನ ಮಹತ್ವವನ್ನು ತಿಳಿಸಲಿದ್ದಾರೆ. ಈ ಅಭಿಯಾನದ ಯಶಸ್ವಿಗಾಗಿ ಎಲ್ಲರೂ ನಿಮ್ಮ ನಿಮ್ಮ ಮೊಬೈಲ್ ಸಂಖ್ಯೆಯಿಂದ 8000980009ಗೆ ಮಿಸ್‍ಕಾಲ್ ನೀಡಬೇಕೆಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಝೇವಿಯರ್ ಡಿಸೋಜಾ ಪ್ರಾಸ್ತವಿಕವಾಗಿ ಮಾತನಾಡಿದರು.
ಪುತ್ತೂರು ರೋಟರಿ ಕ್ಲಬ್‍ನ ಅಧ್ಯಕ್ಷ ಜಗಜೀವನ್‍ದಾಸ್ ರೈ, ರೆಡ್‍ಕ್ರಾಸ್ ಪುತ್ತೂರು ವಲಯದ ಅಧ್ಯಕ್ಷ ಅಸ್ಕರ್ ಆನಂದ್, ಪುತ್ತೂರು ರೋಟರಾಕ್ಟ್ ಕ್ಲಬ್ ಸ್ವರ್ಣದ ಅಧ್ಯಕ್ಷ ಶ್ರೇಯಸ್ ಆನಂದ್, ಉಪನ್ಯಾಸಕರಾದ ಡಾ. ಕೃಷ್ಣಪ್ಪ ಮಡಿವಾಳ, ಪ್ರೋ. ಸ್ಟೀವನ್ ಕ್ವಾಡ್ರಸ್, ಪ್ರೋ. ಐವನ್ ಲೋಬೋ, ಡಾ. ಶ್ರೀಧರ ಗೌಡ, ಡಾ. ನರೇಂದ್ರ ರೈ ದೇರ್ಲ, ಪ್ರೋ. ಜಯರಾಮ್, ಪ್ರೋ.ಗೋಪಾಲಕೃಷ್ಣ, ಪ್ರೋ ಸುಕೇಶ್, ಗ್ರಂಥಪಾಲಕ ಪ್ರವೀಣ್, ದೈಹಿಕ ಶಿಕ್ಷಣ ನಿರ್ದೇಶಕ ಅಬ್ದುಲ್ ಕುಂಞÂ ಮತ್ತಿತರರು ಉಪಸ್ಥಿತರಿದ್ದರು.







