ಗೌರಿ ಲಂಕೇಶ್ ಹತ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ: ಸಚಿವ ಆರ್.ಬಿ. ತಿಮ್ಮಾಪುರ
ದಾವಣಗೆರೆ, ಸೆ.6: ಗೌರಿ ಲಂಕೇಶ್ ಅವರನ್ನು ಹತ್ಯೆಗೈದಿರುವ ಹಂತಕರನ್ನು ಶೀಘ್ರವೇ ಬಂಧಿಸುತ್ತೇವೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ರಾಜ್ಯ ಸರ್ಕಾರದ ವೈಫಲ್ಯವಲ್ಲ. ತುಂಬಾ ತರಬೇತಿ ಪಡೆದವರೇ ಈ ರೀತಿ ಕೃತ್ಯ ನಡೆಸಿದ್ದಾರೆ. ಗೌರಿ ಲಂಕೇಶ್ ಹತ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಮೂರು ತಂಡ ರಚಿಸಿದೆ. ಮಹಾರಾಷ್ಟ್ರದಲ್ಲಿ ನರೇಂದ್ರ ಧಾಬೋಲ್ಕರ್ ಮತ್ತು ಗೋವಿಂದ ಪಾನ್ಸರೆ ಹತ್ಯೆ ಪ್ರಕರಣಗಳನ್ನು ಅಲ್ಲಿನ ಸರಕಾರಗಳು ಗಂಭೀರವಾಗಿ ಪರಿಗಣಿಸಿದೆ. ಹಾಗೆಯೇ ಕಲಬುರ್ಗಿ ಹತ್ಯೆ ಮಾಡಿದವರ ಪತ್ತೆಗಾಗಿ ನಮ್ಮ ಸರಕಾರ ತೀವ್ರ ಶೋಧ ನಡೆಸುತ್ತಿದೆ ಎಂದ ಅವರು, ಗಾಂಧೀಜಿಯವರನ್ನು ಕೊಂದ ಈ ದೇಶದಲ್ಲಿ ಅಂತಹವರೇ ಚಿಂತಕಿ, ಹಿರಿಯ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‍ರನ್ನು ಹತ್ಯೆ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ನಮ್ಮ ರಾಜ್ಯ ಪೊಲೀಸರೇ ದಕ್ಷರಿದ್ದು, ಸಿಬಿಐಗೆ ವಹಿಸುವ ಪ್ರಮೇಯ ಇಲ್ಲ. ಅವರೇ ಎಲ್ಲ ಹಂತಗಳಲ್ಲಿ ತನಿಖೆ ಮಾಡಲಿದ್ದಾರೆ. ಚಿಂತಕರು, ಸೇರಿದಂತೆ ವಿಚಾರವಾದಿಗಳಿಗೆ ನಮ್ಮ ಸರಕಾರ ರಕ್ಷಣೆ ನೀಡುತ್ತದೆ. ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದರು.
ಮಾದಕ ವಸ್ತು ಮಾರಾಟಕ್ಕೆ ತಡೆ: ಶಾಲಾ, ಕಾಲೇಜುಗಳಲ್ಲಿ ಡ್ರಗ್ಸ್, ಅಫೀಮು, ಗಾಂಜಾ, ನಕಲಿ ಮದ್ಯ, ಕಳ್ಳಬಟ್ಟಿ ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು ಮಾರಾಟ ಮಾಡುವವರನ್ನು ಕಂಡುಹಿಡಿಯಲು ಇಲಾಖೆಗೆ ಸೂಚಿಸಿದ್ದೇನೆ. ಇಂತಹವರು ಸಿಕ್ಕರೆ ಅವರನ್ನು ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುವುದು. ಈ ಬಗ್ಗೆ ರಾಜ್ಯಾದ್ಯಂತ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದ ಅವರು, ಜನವಸತಿ ಇರುವ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ವೈನ್ ಶಾಪ್, ಮದ್ಯದಂಗಡಿ ತೆರೆಯಕೂಡದು. ಈ ಕುರಿತು ಏನಾದರೂ ದೂರುಗಳಿದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದರು.
ಈ ಸಂದರ್ಭದಲ್ಲಿ ವಕೀಲರು, ದಲಿತ ಮುಖಂಡರು, ಗೌರಿ ಲಂಕೇಶ್ ಅಭಿಮಾನಿಗಳು ಉಪಸ್ಥಿತರಿದ್ದರು.







