ಸಮಾಜಕ್ಕೆ ನಾರಾಯಣ ಗುರು ಒಂದು ಚೇತನ ಶಕ್ತಿ: ಶಾಸಕ ಕೆ. ಶಿವಮೂರ್ತಿ

ದಾವಣಗೆರೆ, ಸೆ.6: ಶೋಷಿತರ ಉದ್ಧಾರಕ್ಕಾಗಿ ಜೀವಿಸಿದ ನಾರಾಯಣ ಗುರುಗಳು ಹಿಂದುಳಿದ ವರ್ಗಕ್ಕೆ ಸೇರಿದ್ದು, ಬುದ್ಧ, ಬಸವ ಹಾಗೂ ಅಂಬೇಡ್ಕರ್‍ರಂತಹ ಸಾಲಿನಲ್ಲೇ ನಿಲ್ಲುತ್ತಾರೆ. ಇವರು ಸಮಾಜಕ್ಕೆ ಒಂದು ಚೇತನ ಶಕ್ತಿ ಎಂದು ಶಾಸಕ ಕೆ. ಶಿವಮೂರ್ತಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ಆರ್ಯ ಈಡಿಗ ಸಂಘ(ರಿ) ಸಂಯುಕ್ತಾಶ್ರಯದಲ್ಲಿ ವಿನೋಬನಗರದ ಜಿಲ್ಲಾ ಆರ್ಯ ಈಡಿಗರ ಸಂಘದ ವಿದ್ಯಾರ್ಥಿನಿಲಯದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
1956ರಲ್ಲಿ ಈ ಆರ್ಯ ಈಡಿಗ ವಿದ್ಯಾರ್ಥಿನಿಲಯ ಆರಂಭವಾಗಿದ್ದು, ಅಂದಿನಿಂದ ಇಂದಿನವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯ ನೀಡಿ ವಿದ್ಯಾದಾನ ಮಾಡುತ್ತಿದೆ. ಹಿಂದುಳಿದವರ ಸಮಸ್ಯೆಗಳನ್ನು ನೀಗಿಸಿ ಮುಖ್ಯವಾಹಿನಿಗೆ ತರಲು ಹಟ್ಟಿ, ತಾಂಡಾ, ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ ಎಲ್ಲ ಸವಲತ್ತುಗಳನ್ನು ನೀಡಲು ಕ್ರಮ ಜರಗಿಸಲಾಗಿತ್ತಿದೆ. ರಾಜ್ಯ ಭೂಸುಧಾರಣಾ ಕಾಯ್ದೆ ಪಾಸ್ ಆಗಿ ರಾಷ್ಟ್ರಪತಿಗಳ ಅಂಕಿತಕ್ಕೆ ಸಲ್ಲಿಸಲಾಗಿದ್ದು ಇದರಿಂದ ಹಿಂದುಳಿದವರಿಗೆ ಅನುಕೂಲವಾಗಲಿದೆ ಎಂದರು.
ಸಾಹಿತಿ ನಿಕ್ಕಿದಪುಣಿ ಗೋಪಾಲಕೃಷ್ಣ ಉಪನ್ಯಾಸ ನೀಡಿ ಮಾತನಾಡಿ, ಸಂಘಟನೆಯಿಂದ ಶಕ್ತಿ, ಶಿಕ್ಷಣದಿಂದ ಸ್ವಾತಂತ್ರ್ಯ, ಕೈಗಾರಿಕೆ-ಕೃಷಿಯಿಂದ ಅಭಿವೃದ್ಧಿ ಹೊಂದಲು ಸಾಧ್ಯವೆಂದು ಪ್ರತಿಪಾದಿಸಿದ ಬ್ರಹ್ಮ ಶ್ರೀ ನಾರಾಯಣ ಗುರು ತುಳಿತಕ್ಕೊಳಗಾದವರ ನಿಜವಾದ ಗುರುವಾಗಿದ್ದರು. ಬ್ರಹ್ಮ ಎಂದರೆ ವೇದ, ಶ್ರೀ ಎಂದರೆ ಸಂಪತ್ತು, ವೇದವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿ ಸಂಪತ್ತನ್ನು ಮೈಗೂಡಿಸಿಕೊಂಡು ಇನ್ನೊಬ್ಬರಿಗೆ ಉಪದೇಶವನ್ನು ಮಾಡುವ ಶಕ್ತಿ ಹೊಂದಿದ್ದಕ್ಕೆ ನಾರಾಯಣ ಗುರುಗಳನ್ನು ಬ್ರಹ್ಮ ಶ್ರೀ ಎಂದು ಕರೆಯಲಾಯಿತು ಎಂದು ವಿವರಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಪದ್ಮಾ ಬಸಂವತಪ್ಪ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಅನಿತಾಬಾಯಿ ಮಾಲತೇಶ್, ಜಿಲ್ಲಾ ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಎಚ್ .ಶಂಕರಪ್ಪ, ಚುನಾವಣಾ ತಹಶೀಲ್ದಾರ್ ಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಹಾಜರಿದ್ದರು. ಜಿಲ್ಲಾ ಆರ್ಯ ಈಡಿಗ ಸಂಘದ ಕಾರ್ಯದರ್ಶಿ ನಾಗರಾಜ್ ಸ್ವಾಗತಿಸಿದರು.







