ದಿಟ್ಟ ಪತ್ರಕರ್ತೆಯ ಅಮಾನುಷ ಹತ್ಯೆ ಖಂಡನೀಯ : ಬಿ.ಎ.ಮೊಹಿದಿನ್

ಮಂಗಳೂರು.ಸೆ,6:ಗೌರಿ ಲಂಕೇಶ್ ಎಂಬ ದಿಟ್ಟ ಪತ್ರಕರ್ತೆಯ ಅಮಾನುಷ ಹತ್ಯೆ ಖಂಡನೀಯ.ಪ್ರಗತಿಪರ ವಿಚಾರಧಾರೆಯ ಹೆಣ್ಣು ಮಗಳನ್ನು ಈ ರೀತಿ ಹತ್ಯೆ ಮಾಡಿರುವುದರಿಂದ ಅಭಿವ್ಯಕ್ತಿಸ್ವಾತಂತ್ರಕ್ಕೆ ಧಕ್ಕೆ ಯಾದಂತಾಗಿದೆ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ,ಹಿರಿಯ ರಾಜಕೀಯ ಮುತ್ಸದ್ಧಿ ಬಿ.ಎ.ಮೊಹಿದಿನ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಪ್ರಗತಿಪರರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ತಪ್ಪೇ?.ಗೌರಿ ಲಂಕೇಶ್ ತಾವು ನಂಬಿದ ತತ್ವ ಸಿದ್ಧಾಂತದೊಂದಿಗೆ ಯಾರಿಗೂ ಮಣೆ ಹಾಕದೆ ಮುನ್ನಡೆದವರು.ಉದಾಹರಣೆಗೆ ನಕ್ಸಲರು ಮುಖ್ಯವಾಹಿನಿಗೆ ಬರಬೇಕು ಎಂದು ನಂಬಿದ್ದ ಗೌರಿ ಈ ಪ್ರಯತ್ನ ನಡೆಸುತ್ತಿದ್ದಾಗ ಕೆಲವರು ಅವರನ್ನೇ ನಕ್ಸಲರು ಎಂದಾಗಲೂ ದೃತಿ ಗೆಡದೆ ಹಲವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.ದೈರ್ಯವಾಗಿ ನಿರ್ಭೀತಿಯಿಂದ ತಂದೆ ಲಂಕೇಶರ ಹಾದಿಯಲ್ಲಿ ಪತ್ರಿಕೆ ನಡೆಸಿದ ಹೆಣ್ಣು ಮಗಳು ದುಷ್ಕರ್ಮಿಗಳಿಂದ ಅಮಾನುಷವಾಗಿ ಕೊಲೆಯಾಗಿರುವ ಸುದ್ದಿ ತಿಳಿದು ತುಂಬಾ ನೋವಾಗಿದೆ.
ಗೌರಿಯನ್ನು ಕೊಂದ ಮಾತ್ರಕ್ಕೆ ಅವರ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ.ಹೋರಾಟದ ಕಿಚ್ಚನ್ನು ನಂದಿಸಲು ಸಾಧ್ಯವಿಲ್ಲ.ಆಕೆಯ ಹೋರಾಟದ ಹಾದಿಯಲ್ಲಿ ಇನ್ನಷ್ಟು ಧೀರ ಹೆಣ್ಣು ಮಕ್ಕಳು ಹುಟ್ಟಿ ಈ ಹಾದಿಯಲ್ಲಿ ಮುಂದುವರಿಯುತ್ತಾರೆ ಎನ್ನುವುದು ಹಂತಕರು ಅರಿತುಕೊಳ್ಳಬೇಕು.ಗೌರಿ ಲಂಕೇಶರ ಪ್ರಗತಿಪರ ಹೋರಾಟ ಇನ್ನು ಮುಂದುವರಿಯಬೇಕು.ದುಷ್ಕರ್ಮಿಗಳ ಈ ಕೃತ್ಯದ ಬಗ್ಗೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿದ್ದಾರೆ. ದುಷ್ಕರ್ಮಿಗಳನ್ನು ತ್ವರಿತವಾಗಿ ಬಂಧಿಸಿ ಅವರಿಗೆ ಕಠಿಣ ಸಜೆಯಾಗುವಂತೆ ಮಾಡಿದಾಗ ಇಂತಹ ದುಷ್ಕೃತ್ಯಗಳಿಗೆ ಕಡಿವಾಣ ಬೀಳಬಹುದು ಎಂದು ಬಿ.ಎ.ಮೊಹಿದಿನ್ ಸಂತಾಪ ಸೂಚಿಸಿದ್ದಾರೆ.







