ಇಮ್ರಾನ್ ತಾಹಿರ್‌ನ್ನು ಅವಮಾನಿಸಿ ಹೊರದಬ್ಬಿದ ಪಾಕ್ ರಾಯಭಾರಿ ಕಚೇರಿ..!

ಜೋಹಾನ್ಸ್‌ಬರ್ಗ್, ಸೆ.6: ವಿಶ್ವ ಇಲೆವೆನ್ ಕ್ರಿಕೆಟ್ ಸರಣಿಗೆ ಪಾಕಿಸ್ತಾನಕ್ಕೆ ತೆರಳಲು ವೀಸಾಕ್ಕಾಗಿ ಅರ್ಜಿ ಸಲ್ಲಿಸಲು ತೆರಳಿದ್ದ ದಕ್ಷಿಣ ಆಫ್ರಿಕದ ಲೆಗ್ ಸ್ಪಿನ್ನರ್ ಪಾಕ್ ಸಂಜಾತ ಇಮ್ರಾನ್ ತಾಹಿರ್ ಮತ್ತು ಅವರ ಕುಟುಂಬವನ್ನು ಪಾಕ್ ರಾಯಭಾರಿ ಕಚೇರಿಯು ಅವಮಾನಿಸಿ ಹೊರದಬ್ಬಿದ ಘಟನೆ ವರದಿಯಾಗಿದೆ.
ಇಮ್ರಾನ್ ತಾಹಿರ್ ದಕ್ಷಿಣ ಆಫ್ರಿಕ ಎಫ್ ಡು ಪ್ಲೆಸಿಸ್ ನಾಯಕತ್ವದ ವಿಶ್ವ ಇಲೆವೆನ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ವೀಸಾಕ್ಕಾಗಿ ತಾನು ಪಾಕ್ ರಾಯಭಾರಿ ಕಚೇರಿಗೆ ತೆರಳಿದಾಗ ಅಲ್ಲಿ ತನ್ನನ್ನು ಅವಮಾನಿಸಿ ಹೊರ ಕಳುಹಿಸಿರುವುದಾಗಿ ಇಮ್ರಾನ್ ತಾಹಿರ್ ದೂರಿದ್ದಾರೆ.
38ರ ಹರೆಯದ ತಾಹಿರ್ ಹುಟ್ಟಿದ್ದು ಲಾಹೋರ್‌ನಲ್ಲಿ . ಯುವತಿಯೊಬ್ಬಳೊಂದಿಗೆ ಪ್ರೇಮದ ಬಲೆಗೆ ಬಿದ್ದ ತಾಹಿರ್ ಬಳಿಕ ಇಂಗ್ಲೆಂಡ್‌ಗೆ ತೆರಳಿದ್ದರು. ಅಲ್ಲಿಂದ ಕೆಲವು ವರ್ಷಗಳ ಬಳಿಕ ದಕ್ಷಿಣ ಆಫ್ರಿಕ ದೇಶಕ್ಕೆ ಪ್ರಯಾಣಿಸಿ ಅಲ್ಲೇ ತಳವೂರಿದ್ದರು. 2010ದಲ್ಲಿ ದಕ್ಷಿಣ ಆಫ್ರಿಕದ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡರು.
ದಕ್ಷಿಣ ಆಫ್ರಿಕ ತಂಡದ ಪರ 20 ಟೆಸ್ಟ್, 78 ಏಕದಿನ ಮತ್ತು 33 ಟ್ವೆಂಟಿ -20 ಪಂದ್ಯಗಳಲ್ಲಿ ಆಡಿರುವ ತಾಹಿರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 244 ವಿಕೆಟ್ ಸಂಪಾದಿಸಿದ್ದಾರೆ.
ಇದೀಗ ಸ್ಪಿನ್ನರ್ ತಾಹಿರ್ ಪಾಕ್‌ನ ವಿಶ್ವ ಇಲೆವೆನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 2009ರಲ್ಲಿ ಪಾಕಿಸ್ತಾನದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್‌ನ ಮೇಲೆ ಉಗ್ರರ ದಾಳಿ ನಡೆದಿತ್ತು. ಅನಂತರ ಅಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯ ನಡೆಯುವುದಕ್ಕೆ ತಡೆ ಉಂಟಾಗಿತ್ತು. ವಿಶ್ವದ ಪ್ರಮುಖ ಕ್ರಿಕೆಟ್ ತಂಡಗಳು ಪಾಕಿಸ್ತಾನಕ್ಕೆ ತೆರಳಲು ಹಿಂದೇಟು ಹಾಕಿತ್ತು. ಮುಂದೆ ನಡೆಯಲಿರುವ ವಿಶ್ವ ಇಲೆವೆನ್ ಸರಣಿಗೆ ಪಾಕಿಸ್ತಾನ ಆಟಗಾರರಿಗೆ ಸೂಕ್ತ ಭದ್ರತೆ ನೀಡುವ ಭರವಸೆ ನೀಡಿದೆ. ಈ ಕಾರಣದಿಂದಾಗಿ ಕೆಲವು ದೇಶಗಳ ಆಟಗಾರರು ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆ ಇದೆ.







