ಕುಂದಾಪುರ, ಹೆಬ್ರಿಯಲ್ಲಿ ಬೈಕ್ ರ‍್ಯಾಲಿಗೆ ತಡೆ
ಬಿಜೆಪಿ ಮುಖಂಡರ ಸಹಿತ 316 ಮಂದಿಯ ಬಂಧನ

ಉಡುಪಿ, ಸೆ.6: ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಕುಂದಾಪುರ ಹಾಗೂ ಹೆಬ್ರಿಯಲ್ಲಿ ಬುಧವಾರ ಹಮ್ಮಿಕೊಂಡ ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ತಡೆದ ಪೊಲೀಸರು ಹಲವು ಬಿಜೆಪಿ ಮುಖಂಡರು ಸೇರಿದಂತೆ ಒಟ್ಟು 316 ಕಾರ್ಯಕರ್ತರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.
ಹೆಬ್ರಿಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್ ನೇತೃತ್ವದಲ್ಲಿ ನಡೆದ ಬೈಕ್ ರ್ಯಾಲಿಯನ್ನು ನಿಷೇಧದ ಹಿನ್ನೆಲೆಯಲ್ಲಿ ಪೊಲೀಸರು ತಡೆದರು. ಆದರೂ ನೂರಾರು ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತ ಮುನ್ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಶಾಸಕ ಸೇರಿದಂತೆ 40 ಬೈಕುಗಳು ಹಾಗೂ 101ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.
ಅದೇ ರೀತಿ ಕುಂದಾಪುರ ಶಾಸ್ತ್ರೀ ಸರ್ಕಲ್‌ನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ನೇತೃತ್ವದಲ್ಲಿ ನಡೆದ ಬೈಕ್ ರ್ಯಾಲಿಯನ್ನು ಪೊಲೀಸರು ತಡೆದು, 86 ಬೈಕ್ ಸಹಿತ 110 ಕಾರ್ಯಕರ್ತರನ್ನು ಮತ್ತು ಹೆಮ್ಮಾಡಿಯಲ್ಲಿ 75 ಬೈಕ್‌ಗಳು ಹಾಗೂ 105 ಕಾರ್ಯಕರ್ತರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.





