ಗೌರಿ ಲಂಕೇಶ್ ಹತ್ಯೆ ಖಂಡಿಸಿ ಸಿಐಟಿಯು ಪ್ರತಿಭಟನೆ

ಕುಂದಾಪುರ, ಸೆ.6: ಸತ್ತ ಸಿದ್ಧಾಂತದವರು ಸೈದ್ದಾಂತಿಕವಾಗಿ ಎದುರಾಳಿಯನ್ನು ಎದುರಿಸಲು ಸಾಧ್ಯವಾಗದಿದ್ದಾಗ ಹತ್ಯೆ ಮಾಡುವ ದಾರಿಯನ್ನು ಹಿಡಿಯುತ್ತಾರೆ. ಗೌರಿ ಲಂಕೇಶ್‌ರನ್ನು ಹತ್ಯೆ ಮಾಡುವ ಮೂಲಕ ಹಂತಕರು ತಮ್ಮದು ಸತ್ತಿರುವ ಸಿದ್ದಾಂತ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಸಿಐಟಿಯು ಮುಖಂಡ ಎಚ್. ನರಸಿಂಹ ಹೇಳಿದ್ದಾರೆ.
ಗೌರಿ ಲಂಕೇಶ್ ಕೊಲೆಯನ್ನು ಖಂಡಿಸಿ ಕುಂದಾಪುರದಲ್ಲಿ ಇಂದು ಸಿಐಟಿಯು ಹಾಗೂ ಡಿವೈಎಫ್‌ಐ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ್ದೇಶಿಸಿ ಅವರು ಮಾತನಾಡುತಿದ್ದರು.
ನಿರಂತರವಾಗಿ ವಿಚಾರವಾದಿಗಳ ಕೊಲೆಯನ್ನು ಸಂವಿಧಾನದ ಮೇಲೆ ನಂಬಿಕೆಯಿಲ್ಲದ ದೇಶದ್ರೋಹಿಗಳು ಮಾಡುತ್ತಿದ್ದರೂ ಸರಕಾರಕ್ಕೆ ಕೊಲೆಗಾರರನ್ನು ಪತ್ತೆ ಹಚ್ಚಲು ಸಾಧ್ಯವಾಗದಿರುವುದು ಖಂಡನೀಯವಾಗಿದೆ. ಕೃತ್ಯ ನಡೆಸಿದವ ರನ್ನು ಶೀಘ್ರ ಬಂಧಿಸಬೇಕೆಂದು ಅವರು ಆಗ್ರಹಿಸಿದರು.
ಸಿಐಟಿಯು ಮುಖಂಡ ಕೆ.ಶಂಕರ್ ಮಾತನಾಡಿ, ಈ ಹಿಂದೆ ನಡೆದ ಕೊಲೆಗಳಿಗೆ ನ್ಯಾಯ ಸಿಗದ ಹಿನ್ನಲೆಯಲ್ಲಿ ಕೊಲೆಗಡುಕರು ಮತ್ತಷ್ಟು ಕೃತ್ಯಗಳನ್ನು ಯಾವುದೇ ಭಯವಿಲ್ಲದೇ ಮಾಡುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರಕಾರದ ವಿಫಲತೆಯಿಂದಾಗಿ ಜನಸಾಮಾನ್ಯರಿಗೂ ರಕ್ಷಣೆ ಇಲ್ಲದಂತಾಗಿದೆ. ಈ ಪ್ರಕರಣ ಶೀಘ್ರ ಭೇಧಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಡಿವೈಎಫ್‌ಐ ಮುಖಂಡ ರಾಜೇಶ್ ವಡೇರಹೋಬಳಿ, ಸಿಐಟಿಯು ಮುಖಂಡರಾದ ಸುರೇಶ್ ಕಲ್ಲಾಗರ, ವೆಂಕಟೇಶ್ ಕೋಣಿ, ರವಿ, ವಿ.ನರಸಿಂಹ, ಮಹಾಬಲ ವಡೇರಹೋಬಳಿ, ರಾಜ ಬಿ.ಟಿ.ಆರ್., ಬಲ್ಕೀಸ್, ರಾಜು ದೇವಾಡಿಗ ಉಪಸ್ಥಿತರಿದ್ದರು. ಬಳಿಕ ಶ್ರಧ್ಧಾಂಜಲಿಯನ್ನು ಅರ್ಪಿಸ ಲಾಯಿತು.







