ನಿರ್ಭೀತ ಪತ್ರಕರ್ತೆಯ ಗುಣಗಾನ ಮಾಡಿದ ವಿದೇಶಿ ಮಾಧ್ಯಮಗಳು
ಗೌರಿ ಲಂಕೇಶ್ ಹತ್ಯೆಯ ವರದಿ ಪ್ರಕಟಿಸಿದ ದ ಗಾರ್ಡಿಯನ್, ಬಿಬಿಸಿ, ನ್ಯೂಯಾರ್ಕ್ ಟೈಮ್ಸ್

ಬೆಂಗಳೂರು : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಘಟನೆಯಿಂದ ಇಡೀ ದೇಶವೇ ಆಘಾತಗೊಂಡಿದೆ. ದೇಶದಾದ್ಯಂತವಲ್ಲದೆ ವಿದೇಶಗಳಿಂದಲೂ ಗೌರಿ ಹತ್ಯೆಗೆ ಖಂಡನೆಗಳ ಮಹಾಪೂರವೇ ಹರಿದು ಬರುತ್ತಿದೆ. 55 ವರ್ಷದ ಗೌರಿ ತಮ್ಮ ಲಂಕೇಶ್ ಪತ್ರಿಕೆಯ ಮೂಲಕ ದಿಟ್ಟ ಪತ್ರಕರ್ತೆಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರಲ್ಲದೆ ತಮ್ಮ ಖಡಕ್ ಬರಹಗಳಿಂದ ಕೆಲ ಸಂಘಟನೆಗಳ ಆಕ್ರೋಶಕ್ಕೂ ಗುರಿಯಾಗಿದ್ದವರು.
ವಿಪಕ್ಷಗಳು ಕೊಲೆ ಕೃತ್ಯವನ್ನು ಖಂಡಿಸಿ ಆರೋಪಿಗಳನ್ನು ಶೀಘ್ರ ಪತ್ತೆ ಹೆಚ್ಚುವಂತೆ ಬೇಡಿಕೆಯಿರಿಸಿದ್ದರೆ, ಕೇಂದ್ರ ಸಚಿವರುಗಳಾದ ಸ್ಮøತಿ ಇರಾನಿ ಹಆಗೂ ರಾಜವರ್ಧನ್ ಸಿಂಗ್ ರಾಥೋರ್ ಕೂಡ ಹತ್ಯೆಯನ್ನು ಖಂಡಿಸಿದ್ದಾರೆ. ತರುವಾಯ ಕರ್ನಾಟಕ ಮುಉಖ್ಯಮಂತ್ರಿ ಈ ಕೊಲೆ ತನಿಖೆಗೆ ವಿಶೇಷ ತನಿಖಾ ತಂಡ ರಚನೆಯನ್ನೂ ಘೊಷಿಸಿದ್ದಾರೆ. ಕೊಲೆಯನ್ನು ಖಂಡಿಸಿ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವಂತೆಯೇ ವಿದೇಶಿ ಮಾಧ್ಯಮಗಳೂ ಈ ಪತ್ರಕರ್ತೆಯ ಕೊಲೆಯನ್ನು ಗಂಭೀರವಾಗಿ ಪರಿಗಣಿಸಿ ವರದಿಗಳನ್ನು ಪ್ರಕಟಿಸಿವೆ.
ದಿ ನ್ಯೂಯಾರ್ಕ್ ಟೈಮ್ಸ್

ಅಮೆರಿಕಾದ ಈ ಪತ್ರಿಕೆಯು ಅಸೋಸಿಯೇಟೆಡ್ ಪ್ರೆಸ್ ಹಾಗೂ ರೂಟರ್ಸ್ ಏಜನ್ಸಿ ಮೂಲಕ ಬಂದ ಎರಡು ವರದಿಗಳನ್ನು ಪ್ರಕಟಿಸಿದೆ. ರೂಟರ್ಸ್ ವರದಿಯು ಗೌರಿ ಲಂಕೇಶ್ ಅವರನ್ನು `ನಿರ್ಭೀತ ಹಾಗೂ ವಾಕ್ಚತುರೆ ಪತ್ರಕರ್ತೆ' ಎಂದು ಬಣ್ಣಿಸಿತ್ತಲ್ಲದೆ ಆಕೆ ಬಲಪಂಥೀಯ ಸಿದ್ಧಾಂತದ ಕಡು ವಿರೋಧಿಯಾಗಿದ್ದನ್ನೂ ಉಲ್ಲೇಖಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರ ಹೇಳಿಕೆಗಳೂ ಉಲ್ಲೇಖಗೊಂಡಿದ್ದವು. ಅಸೋಸಿಯೇಟೆಡ್ ಪ್ರೆಸ್ ಲೇಖನವು ವಿದ್ವಾಂಸ ಎಂ ಎಂ ಕಲಬುರ್ಗಿ , ವಿಚಾರವಾದಿ ಗೋವಿಂದ ಪನ್ಸಾರೆ ಹಾಗೂ ನರೇಂದ್ರ ದಾಭೋಲ್ಕರ್ ಹತ್ಯೆ ಘಟನೆಗಳ ಮೇಲೂ ಬೆಳಕು ಚೆಲ್ಲಿತ್ತು. ಅವರನ್ನು ಕೂಡ ಗೌರಿ ಅವರನ್ನು ಕೊಲೆಗೈದ ರೀತಿಯಲ್ಲೇ ಹತ್ಯೆ ಮಾಡಲಾಗಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.
ಬಿಬಿಸಿ

ಬಿಬಿಸಿ ವೆಬ್‍ಸೈಟ್ ಕೂಡ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವರದಿ ಪ್ರಕಟಿಸಿದೆಯಲ್ಲದೆ ``ಇತ್ತೀಚಿಗಿನ ವರ್ಷಗಳಲ್ಲಿ ಕೊಲೆಗೀಡಾದ ಭಾರತದ ಅತ್ಯಂತ ಪ್ರಮುಖ ಪತ್ರಕರ್ತೆ' ಎಂದು ಆಕೆಯನ್ನು ಬಣ್ಣಿಸಿದೆ. ತೀವ್ರವಾದಿ ಹಿಂದುತ್ವಗಳ ಆಕ್ರೋಶಕ್ಕೆ ಪತ್ರಕರ್ತರು ಇತ್ತೀಚಿಗಿನ ದಿನಗಳಲ್ಲಿ ಬಲಿಯಾಗುತ್ತಿದ್ದಾರೆ ಎಂದೂ ವರದಿಯಲ್ಲ ಹೇಳಲಾಗಿದೆಯಲ್ಲದೆ ಮಹಿಳಾ ಪತ್ರಕರ್ತೆಯರು ಅತ್ಯಾಚಾರ ಮತ್ತು ಹಲ್ಲೆ ಬೆದರಿಕೆಗಳನ್ನೂ ಎದುರಿಸುತ್ತಿದ್ದಾರೆ ಎಂದು ತಿಳಿಸಿದೆ.
ದ ಗಾರ್ಡಿಯನ್

ಗೌರಿ ಲಂಕೇಶ್ ಅವರು ಹಿಂದೂ ತೀವ್ರವಾದಿಗಳ ಕಟು ಟೀಕಾಕಾರ್ತಿಯಾಗಿದ್ದರು ಎಂಬುದನ್ನು ದಿ ಗಾರ್ಡಿಯನ್ ಪತ್ರಿಕೆ ಹೇಳಿಕೊಂಡಿದೆ. `ಇಂಡಿಯನ್ ಜರ್ನಲಿಸ್ಟ್ ಕ್ರಿಟಿಕಲ್ ಆಫ್ ಹಿಂದು ಎಕ್ಸ್ ಟ್ರೀಮಿಸ್ಟ್ಸ್ ಈಸ್ ಶಾಟ್ ಡೆಡ್ ಇನ್ ಬೆಂಗಳೂರು' ಎಂಬ ಶೀರ್ಷಿಕೆಯ ತನ್ನ ವರದಿಯಲ್ಲಿ ಪತ್ರಿಕೆಯು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹೇಳಿಕೆಯನ್ನು ಉಲ್ಲೇಖಿಸಿ ಆಕೆಯ ಬರಹಗಳಿಗೂ ಆಕೆಯ ಕೊಲೆಗೂ ಸಂಬಂಧವಿದ್ದಿರಬಹುದು ಎಂದು ಹೇಳಿದೆ. `` ಹಲವಾರು ವಿಚಾರಗಳಲ್ಲಿ ನ್ಯಾಯಕ್ಕಾಗಿ ಹೋರಾಡಿದ್ದ ನಿರ್ಭೀತ, ಸ್ವತಂತ್ರ ಪತ್ರಕರ್ತೆಯೊಬ್ಬರನ್ನು ಅತ್ಯಂತ ಅಮಾನುಷ ರೀತಿಯಲ್ಲಿ ಗುಂಡಿಕ್ಕಿ ಸಾಯಿಸಿ ಆಕೆಯ ದನಿಯನ್ನು ಶಾಶ್ವತವಾಗಿ ಅಡಗಿಸಲಾಗಿದೆ'' ಎಂದು ವರದಿಯಲ್ಲಿ ತಿಳಿಸಲಾಗಿದೆ. 1992ರಿಂದ ಭಾರತದಲ್ಲಿ ಪತ್ರಕರ್ತರನ್ನು ಯಾವುದೇ ಭೀತಿಯಿಲ್ಲದೆ ಹತ್ಯೆಗೈಯ್ಯಲಾಗುತ್ತಿದೆ ಎಂದೂ ಹೇಳಲಾಗಿದೆ.
ದಿ ವಾಷಿಂಗ್ಟನ್ ಪೋಸ್ಟ್

ಗೌರಿ ಲಂಕೇಶ್ ಅವರ ಕೊಲೆಗೆ ಸಂಬಂಧಿಸಿದಂತೆ ದಿ ವಾಷಿಂಗ್ಟನ್ ಪೋಸ್ಟ್ ಕೂಡ ಏಜನ್ಸಿ ವರದಿಯೊಂದನ್ನು ಪ್ರಕಟಿಸಿದೆ. ಭಾರತದಲ್ಲಿ ಇತ್ತೀಚಿಗಿನ ವರ್ಷಗಳಲ್ಲಿ ಸ್ವತಂತ್ರ ಪತ್ರಕರ್ತರು ಹಾಗೂ ಧಾರ್ಮಿಕ ಅಂಧಶ್ರದ್ಧೆಗಳ ಟೀಕಾಕಾರರ ಮೇಲೆ ದಾಳಿಗೈಯ್ಯುವ ಹಲವು ಘಟನೆಗಳು ನಡೆದಿವೆಯೆಂದು ವರದಿಯಲ್ಲಿ ತಿಳಿಸಲಾಗಿದೆ. ``ದಕ್ಷಿಣ ಏಷ್ಯಾದ ಜಾತ್ಯತೀತ ಪ್ರಜಾಪ್ರಭುತ್ವ ದೇಶವೊಂದರಲ್ಲಿ ತೀವ್ರವಾದ ಹಾಗೂ ಅಸಹಿಷ್ಣುತೆಯ ಬೆಳವಣಿಗೆಯ ಬಗ್ಗೆ ಆತಂಕ ಮೂಡಿಸಿದೆ'' ಎಂದು ವರದಿ ತಿಳಿಸಿದೆ.







