ಫೇಸ್ಬುಕ್ ನಲ್ಲಿ ಮಕ್ಕಾ ಬಗ್ಗೆ ಅವಹೇಳನಕಾರಿ ಪೋಸ್ಟ್ : ಯು.ಟಿ.ಖಾದರ್ ಖಂಡನೆ, ತನಿಖೆಗೆ ನಿರ್ದೇಶ

ಮಂಗಳೂರು, ಸೆ.6: "ಹಿಂದೂಸ್ತಾನದ ಹುಲಿ" ಎಂಬ ಫೇಸ್ಬುಕ್ ಪೇಜ್ ನಲ್ಲಿ ಪವಿತ್ರ ಮಕ್ಕಾದ ಫೋಟೊ ಎಡಿಟ್ ಮಾಡಿ ಅವಹೇಳನ ಮಾಡಿರುವ ಫೇಸ್ಬುಕ್ ಖಾತೆಯ ವ್ಯಕ್ತಿಯನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಹಾಗೂ ಉಡುಪಿ ಜಿಲ್ಲಾ ಎಸ್ಪಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಅವರು ನಿರ್ದೇಶಿಸಿದ್ದಾರೆ.
ಅವಹೇಳನಕಾರಿ ಕಮೆಂಟಿನೊಂದಿಗೆ ಮಕ್ಕಾದ ಕಅಬಾದ ಮೇಲೆ ವ್ಯಕ್ತಿಯೊಬ್ಬ ನಿಂತಿರುವಂತೆ ಫೋಟೋ ಇಟ್ಟು, ಕೇಸರಿ ಧ್ವಜ ಹಾಕಿದ್ದ ದುಷ್ಕರ್ಮಿ "ಹಿಂದೂಸ್ತಾನದ ಹುಲಿ" ಫೇಸ್ಬುಕ್ ಪೇಜ್ ನಲ್ಲಿ ಹಾಕಿ ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಟ್ಟಿದ್ದ. ಇದರಿಂದ ಮುಸ್ಲಿಮರ ಭಾವನೆಗೆ ನೋವಾಗಿದ್ದು, ಇಂತಹ ನೀಚ ಕೃತ್ಯ ಎಸಗಿದವರ ವಿರುದ್ಧ ದೂರು ದಾಖಲಿಸುವಂತೆ ದ.ಕ. ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷ ಎನ್.ಎಸ್. ಕರೀಂ ಹಾಗೂ ಕರಾವಳಿ ವಲಯ ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷ ಯು.ಬಿ. ಸಲೀಂ ಅವರು ಸಚಿವ ಯು.ಟಿ. ಖಾದರ್ ಹಾಗೂ ಉಡುಪಿ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಯು.ಟಿ. ಖಾದರ್ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸಿದ್ದಾರೆ.
ಈ ಹಿಂದೆ ಇದೇ ರೀತಿ ಫೇಸ್ಬುಕ್ ನಲ್ಲಿ ಕಟೀಲು ದೇವಿಯ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿಯೊಬ್ಬರ ಮೇಲೆಯೂ ಆಹಾರ ಸಚಿವರು ತನಿಖೆಗೆ ನಿರ್ದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.





