ಬಾಲಕಾರ್ಮಿಕ ಪದ್ಧತಿ: ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮಡಿಕೇರಿ, ಸೆ.6 : ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿ ಕಂಡುಬಂದಲ್ಲಿ, ಬಾಲಕಾರ್ಮಿಕರ ಪೋಷಕರು ಹಾಗೂ ದುಡಿಸಿಕೊಳ್ಳುವವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮಕೈಗೊಳ್ಳುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಬೇಕು. 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಎಂಬುದು ಕಾಯ್ದೆ ಇದೆ. ಆದರೂ ಸಹ ಶಾಲೆಯಿಂದ ಮಕ್ಕಳು ಹೊರಗುಳಿಯಲು ಕಾರಣವೇನು ಎಂಬ ಬಗ್ಗೆ ನಿಖರ ಮಾಹಿತಿ ಪಡೆಯುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಸರ್ಕಾರ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯ, ಸಮವಸ್ತ್ರ, ಮಧ್ಯಾಹ್ನದ ಬಿಸಿ ಊಟ, ಬೈಸಿಕಲ್ ಯೋಜನೆ, ಶೂ ಭಾಗ್ಯ ಹೀಗೆ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೂ ಸಹ ಶಾಲೆಯಿಂದ ಹೊರಗುಳಿಯಲು ಕಾರಣ ಪತ್ತೆ ಹಚ್ಚಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 202, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 49 ಮಕ್ಕಳು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂಬ ಅಂಕಿಅಂಶ ನೀಡಿದ್ದಾರೆ. ಆದರೆ ಬಗ್ಗೆ ನಿಖರ ಮಾಹಿತಿ ಪಡೆಯಲು ಸಮೀಕ್ಷೆ ನಡೆಸುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಂಬಂಧಿಸಿದಂತೆ ಮತ್ತಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸಲಹೆ ಮಾಡಿದರು. ಕಾರ್ಮಿಕ ಇಲಾಖೆಯ ಅಧಿಕಾರಿ ರಾಮಚಂದ್ರ ಅವರು ಎಸ್.ಸಿಪಿ. ಮತ್ತು ಟಿಎಸ್‍ಪಿ ಯೋಜನೆಯಡಿ ಅನುದಾನ ಬಿಡುಗಡೆಯಾಗಿದ್ದು, ಈ ಸಂಬಂಧ ಬೀದಿನಾಟಕ ಏರ್ಪಡಿಸುವುದು, ನಾಮಫಲಕ ಅಳವಡಿಸುವುದು ಮತ್ತಿತರ ಬಗ್ಗೆ ಕ್ರಿಯಾಯೋಜನೆ ತಯಾರಿಸಿ ಮಂಡಿಸಲಾಗುವುದು ಎಂದರು.
ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ತಾಲ್ಲೂಕು ಕಾರ್ಮಿಕ ಅಧಿಕಾರಿಗಳಾದ ಯತ್ನಟ್ಟಿ, ಮಹದೇವ ಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ದಶರಥ ಎಂ.ದಾನೋಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಎನ್.ಎಂ.ಜಗದೀಶ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ರೇಷ್ಮೆ, ಲೋಕೋಪಯೋಗಿ ಇಲಾಖೆಯ ಎಇಇ ನಟೇಶ್, ಸಮಾಜ ಕಲ್ಯಾಣ, ಐಟಿಡಿಪಿ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.







