ಟ್ವೆಂಟಿ-20 ಪಂದ್ಯದಲ್ಲೂ ಭಾರತಕ್ಕೆ ಜಯ
ವಿರಾಟ್ ಕೊಹ್ಲಿ 82, ಮನೀಷ್ ಪಾಂಡೆ ಅಜೇಯ 51

ಕೊಲಂಬೊ, ಸೆ.6: ನಾಯಕ ವಿರಾಟ್ ಕೊಹ್ಲಿ(82 ರನ್, 54 ಎಸೆತ) ಹಾಗೂ ಮನೀಶ್ ಪಾಂಡೆ(ಅಜೇಯ 51, 36 ಎಸೆತ) ಅರ್ಧಶತಕದ ನೆರವಿನಿಂದ ಭಾರತ ತಂಡ ಶ್ರೀಲಂಕಾ ವಿರುದ್ಧದ ಏಕೈಕ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 7 ವಿಕೆಟ್‌ಗಳ ಜಯ ಸಾಧಿಸಿದೆ.
ಇಲ್ಲಿನ ಪ್ರೇಮದಾಸ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 171 ರನ್ ಗುರಿ ಪಡೆದಿದ್ದ ಭಾರತ 19.2 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 174 ರನ್ ಗಳಿಸಿತು.
ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದ್ದ ಕೊಹ್ಲಿ ಪಡೆ ಏಕೈಕ ಟ್ವೆಂಟಿ-20 ಪಂದ್ಯದಲ್ಲೂ ಪ್ರಾಬಲ್ಯ ಮೆರೆದಿದೆ.
ಆರಂಭಿಕ ಆಟಗಾರರಾದ ರೋಹಿತ್ ಶರ್ಮ(9) ಹಾಗೂ ಕೆ.ಎಲ್.ರಾಹುಲ್(24) ಭಾರತ 42 ರನ್ ಗಳಿಸುವಷ್ಟರಲ್ಲಿ ಪೆವಿಲಿಯನ್‌ಗೆ ವಾಪಸಾದರು. ಆಗ ಜೊತೆಯಾದ ನಾಯಕ ಕೊಹ್ಲಿ(82, 54ಎಸೆತ, 7 ಬೌಂಡರಿ, 1 ಸಿಕ್ಸರ್) ಹಾಗೂ ಮನೀಷ್ ಪಾಂಡೆ(ಅಜೇಯ 51, 36 ಎಸೆತ, 4 ಬೌಂಡರಿ, 1 ಸಿಕ್ಸರ್)3ನೆ ವಿಕೆಟ್‌ಗೆ 118 ರನ್ ಜೊತೆಯಾಟ ನಡೆಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೊಹ್ಲಿ 82 ರನ್ ಗಳಿಸಿ 18.3ನೆ ಓವರ್‌ನಲ್ಲಿ ಔಟಾದರು.
ಇದಕ್ಕೆ ಮೊದಲು ದಿಲ್ಶನ್ ಮುನವೀರ(53) ಹಾಗೂ ಅಶನ್ ಪ್ರಿಯಾಂಜನ್‌ರ(ಅಜೇಯ 40) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡ ಭಾರತ ವಿರುದ್ಧದ ಏಕೈಕ ಟ್ವೆಂಟಿ-20 ಪಂದ್ಯದಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 170 ರನ್ ಗಳಿಸಿತ್ತು.







