ಬೆಳ್ತಂಗಡಿ : ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ

ಬೆಳ್ತಂಗಡಿ,ಸೆ.6: ಹಿಂದುಳಿದ ವರ್ಗದವರಿಗೆ ಹಿಂದೆ ತುಂಡು ಬಟ್ಟೆಯುಡಲು ಮೇಲ್ಜಾತಿಯ ಅನುಮತಿ ಬೇಕಿತ್ತು. ದೇವಸ್ಥಾನಗಳ ಬಳಿ ಹೋಗಲು ಅವಕಾಶವಿರಲಿಲ್ಲ. ಅದಕ್ಕಾಗಿ ಹಿಂದುಳಿದ ವರ್ಗದವರಿಗೆ ನ್ಯಾಯ ಒದಗಿಸಲು ಮತ್ತು ಅವರ ರಕ್ಷಣೆಗೆ ಮುಂದಾದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಶಾಸಕ, ರಾಜ್ಯ ಸಣ್ಣ ಕೈಗಾರಿಕ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ. ವಸಂತ ಬಂಗೇರ ಹೇಳಿದರು.
ಅವರು ಬುಧವಾರ ಬೆಳ್ತಂಗಡಿ ಶ್ರೀ ನಾರಾಯಣ ಗುರು ವಾಣಿಜ್ಯ ಸಂಕೀರ್ಣದ ಸಭಾಭವನದಲ್ಲಿ ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಉದ್ಘಾಟಿಸಿ ಮಾತಾನಾಡಿದರು.
ದೇವಸ್ಥಾನಗಳನ್ನು ನಿರ್ಮಿಸುವ ಮೂಲಕ ಹಿಂದುಳಿದ ವರ್ಗದವರಿಗೆ ದೇವಸ್ಥಾನ ಪ್ರವೇಶಿಸುವ ಅವಕಾಶ ಕಲ್ಪಿಸಿದರು. ಶಿಕ್ಷಣದಿಂದ ಸ್ವತಂತ್ರರಾಗಿರಿ ಎಂಬ ಸಂದೇಶ ನೀಡಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ ಮಹಾನ್‍ಗುರು ನಾರಾಯಣ ಗುರುಗಳು ಎಂದರು.
ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಧ್ಯಕ್ಷ ಮುಗುಳಿ ನಾರಾಯಣ ರಾವ್ ಅವರು, ನಾರಾಯಣ ಗುರುಗಳು ಒಂದೇ ಜಾತಿಗೆ ಸೀಮಿತವಾಗದೇ ಎಲ್ಲಾ ಹಿಂದುಳಿದ ವರ್ಗಗಳಿಗೆ ಗುರುಗಳಾಗಿದ್ದಾರೆ. ಕಳೆದ ವರ್ಷದಿಂದ ಸರಕಾರ ವತಿಯಿಂದ ನಾರಾಯಣಗುರು ಜಯಂತಿ ಆಚರಣೆ ತಂದಿದೆ. ಸರಕಾರಿ ಅಧಿಕಾರಿಗಳು ಕಾಟಾಚಾರಕ್ಕೆ ಕಾರ್ಯಕ್ರಮವನ್ನು ಮಾಡಬಾರದು. ಸರಕಾರಿ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬಂದಿಗಳು ಗೈರು ಹಾಜರಾಗಿರುವುದು ಸರಿಯಲ್ಲ. ಸರಕಾರಿ ಎಲ್ಲಾ ಇಲಾಖೆಗಳು ಸಂಘ ಸಂಸ್ಥೆಗಳನ್ನು ಸೇರಿಸಿಕೊಂಡು ವಿಜೃಂಭಣೆಯಿಂದ ಆಚರಿಸಬೇಕು. ಈ ಭಾರಿ ತಾಲೂಕು ಕಛೇರಿಯ ಬೆರಳೆಣಿಕೆಯ ಸಿಬ್ಬಂದಿಗಳು ಕಾಣುತ್ತಿದ್ದು ಮುಂದಿನ ವರ್ಷದಿಂದ ಈ ರೀತಿ ಆಗದಂತೆ ಶಾಸಕರು ಇಲಾಖೆಗಳಿಗೆ ಕಡ್ಡಾಯ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ತಾ. ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ ಶುಭಹಾರೈಸಿದರು. ತಾ. ಪಂ ಅದ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆ ವಹಿಸಿದರು. ಬೆಳ್ತಂಗಡಿ ಶ್ರೀ ಗು.ನಾ. ಸ್ವಾಮಿ ಸೇವಾ ಸಂಘದಅಧ್ಯಕ್ಷ ಭಗೀರಥ ಜಿ, ಜಿ. ಪಂ. ಸದಸ್ಯೆ ಮಮತಾ ಶೆಟ್ಟಿ ಉಪಸ್ಥಿತರಿದ್ದರು.
ತಾಲೂಕು ಕಚೇರಿ ಪ್ರ. ದ. ಸಹಾಯಕ ಶಂಕರ ಸ್ವಾಗತಿಸಿ, ಸಿಬಂದಿ ನಾರಾಯಣ ಗೌಡ ವಂದಿಸಿದರು. ಶ್ರೀ ಗುರುದೇವ ಸೊಸೈಟಿಯ ಮುಖ್ಯಕಾರ್ಯನಿರ್ವಾಹಣಧಿಕಾರಿ ಅಶ್ವತ್ ಕುಮಾರ್ ನಿರೂಪಿದರು.







