ರೈತ ಅನುವುಗಾರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ

ಶಿಕಾರಿಪುರ, ಸೆ.6: ದಶಕದಿಂದ ಸೇವೆ ಸಲ್ಲಿಸುತ್ತಿದ್ದರೂ ಸೇವಾ ಭದ್ರತೆ,ಅಧಿಕವಾದ ವೇತನ ತಾರತಮ್ಯದಿಂದ ರೈತ ಅನುವುಗಾರರ ಬದುಕು ಶೋಚನೀಯವಾಗಿದ್ದು, ಕೂಡಲೇ ಸೇವಾ ಭದ್ರತೆಯ ಜತೆಗೆ ಸೇವೆಗೆ ಸರಿಸಮಾನ ವೇತನ ಮತ್ತಿತರ ಬೇಡಿಕೆಗೆ ಆಗ್ರಹಿಸಿ ಬುಧವಾರ ತಾಲೂಕಿನ ರೈತ ಅನುವುಗಾರರು ತಾ.ಪಂ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.
ಭೂಚೇತನ ಯೋಜನೆಯಡಿ ಸರ್ಕಾರ ರೂಪಿಸಿದ ರೈತಪರ ಕೃಷಿ ಹೊಂಡ,ಎರೆಹುಳುತೊಟ್ಟಿ, ಬಯೋಡೈಜೆಸ್ಟರ್,ನೆಲಜಲ ಯೋಜನೆ, ಭೂ ಸಮೃದ್ಧಿ ಗೊಬ್ಬರ,ಕೃಷಿ ಯಂತ್ರೋಪಕರಣ,ಸಾವಯುವ ಗೊಬ್ಬರ ಬಳಕೆ ಹಾಗೂ ಉಪಯೋಗ,ರೈತರ ಬೆಳೆಗೆ ಧಕ್ಕೆಯಾಗುವ ಕೀಟಗಳ ಪರಿಶೀಲನೆ ಮತ್ತಿತರ ಹಲವು ಯೋಜನೆಗಳನ್ನು ಪ.ಜಾತಿ ಪಂಗಡದ ಜತೆಗೆ ಸಾಮಾನ್ಯ ರೈತರಿಗೆ ಅನುವುಗಾರರು ಸಕಾಲದಲ್ಲಿ ತಲುಪಿಸುತ್ತಿದ್ದು ರೈತ ಕ್ಷೇತ್ರ ಪಾಠಶಾಲೆಯ ಮೂಲಕ ರೈತರಿಗೆ ಸೂಕ್ತ ಮಾಹಿತಿ, ಬೀಜೋಪಚಾರ,ಬೀಜ ಹಂಚಿಕೆ ಮಣ್ಣು ಮಾದರಿ ಸಂಗ್ರಹಣೆ, ಮಣ್ಣು ಪರೀಕ್ಷಾ ಕಾರ್ಡ ಹಂಚಿಕೆ, ಕಿಸಾನ್ ರೈತರ ನೋಂದಣಿ ಹಾಗೂ ಕಾರ್ಡ ಹಂಚಿಕೆ,ಕೃಷಿ ಅಭಿಯಾನ ಕಾರ್ಯಕ್ರಮ ಮತ್ತಿತರ ಹಲವು ಕಾರ್ಯಕ್ರಮವನ್ನು ಪ್ರಾಮಾಣಿಕವಾಗಿ ರೈತರಿಗೆ ತಲುಪಿಸುತ್ತಿರುವ ರೈತ ಅನುವುಗಾರರನ್ನು ಸರ್ಕಾರ ಪೂರ್ವಾಪರ ಮಾಹಿತಿಯಿಲ್ಲದೆ ಸೇವೆಯಿಂದ ವಜಾಗೊಳಿಸಿದ್ದು ಸತತ ದಶಕದಿಂದ ಸೇವೆ ಸಲ್ಲಿಸುತ್ತಿರುವ ಅನುವುಗಾರರು ಸರ್ಕಾರದ ನಿರ್ಧಾರದಿಂದ ದಿಕ್ಕುತೋಚದಂತಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ಪ್ರಕಾಶ್ ಆರೋಪಿಸಿದರು.
ವರ್ಷ ಪೂರ್ತಿ ಸೇವೆ ಸಲ್ಲಿಸಿ ಕೇವಲ 120 ದಿನಕ್ಕೆ ದಶಕದಿಂದ ವೇತನ ಪಡೆದು ಸೇವೆಖಾಯಂಗೊಳ್ಳುವ ಆಸೆಯಲ್ಲಿದ್ದ ಅನುವುಗಾರರನ್ನು ಸರ್ಕಾರ ವಂಚಿಸಿದೆ ಎಂದು ದೂರಿದ ಅವರು ವೃತ್ತಿಯನ್ನು ನಂಬಿ ತಾಲೂಕಿನಾದ್ಯಂತ ಹಲವು ಕುಟುಂಬಗಳು ಬೀದಿಪಾಲಾಗುವ ಆತಂಕದಲ್ಲಿದ್ದು ಸರ್ಕಾರ ಈ ಕೂಡಲೇ ಮಾನವೀಯತೆಯ ನೆಲೆಗಟ್ಟಿನಲ್ಲಿ ಸೇವೆಯನ್ನು ಖಾಯಂಗೊಳಿಸಿ ವರ್ಷಪೂರ್ತಿ ವೇತನ ಉದ್ಯೋಗ ನೀಡುವಂತೆ ಅವರು ಮನವಿ ಮಾಡಿದರು.
ಕೃಷಿ ಕಾರ್ಯದಲ್ಲಿ ರೈತರಿಗೆ ನೆರವಾಗುತ್ತಿದ್ದ ಅನುವುಗಾರರ ಬೇಡಿಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ರಾಜ್ಯಮಟ್ಟದಲ್ಲಿ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕಲ್ಲನಗೌಡ, ನಿರಂಜನಸ್ವಾಮಿ,ಪ್ರವೀಣ, ವೆಂಕಟೇಶ,ತಿಪ್ಪೇಶಪ್ಪ,ರಮೇಶ್ ಮತ್ತಿತರರಿದ್ದರು.







