ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಪತಿ ದಿ.ಮಹದೇವ ಪ್ರಸಾದ್ ಅವರ ಕನಸನ್ನು ಈಡೇರಿಸುವೆ: ಸಚಿವೆ ಗೀತಾ ಮಹದೇವಪ್ರಸಾ
.jpg)
ಹನೂರು, ಸೆ.6: ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ನೇಮಕ ಮಾಡಿದ್ದಲ್ಲಿ ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷೆಯಾಗಲಿದ್ದು, ಶ್ರೀ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಪತಿ ದಿ.ಮಹದೇವ ಪ್ರಸಾದ್ ಅವರ ಕನಸನ್ನು ಸಾಕಾರಗೊಳಿಸುವುದಾಗಿ ಸಕ್ಕರೆ ಹಾಗೂ ಸಣ್ಣ ಕೈಗಾರಿಕೆ ಸಚಿವೆ ಗೀತಾ ಮಹದೇವಪ್ರಸಾದ್ ತಿಳಿಸಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೀತಾ ಮಹದೇವಪ್ರಸಾದ್ ಅವರು ಶಾಸಕಿಯಾಗಿ ಆಯ್ಕೆಯಾಗಿ ಸಚಿವರಾದ ಬಳಿಕ ಪ್ರಥಮಬಾರಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯೆ ಹನೂರು ಪಟ್ಟಣದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟವನ್ನು ತಿರುಪತಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪತಿ ಮಹದೇವಪ್ರಸಾದ್ ಅವರು ಶ್ರಮಿಸಿದ್ದರು. ಆದರೆ ಅವರ ನಿಧನದ ಬಳಿಕ ಪ್ರಾಧಿಕಾರದ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿರುವುದು ಗಮನಕ್ಕೆ ಬಂದಿದೆ. ಒಂದೊಮ್ಮೆ ಚಾಮರಾಜನಗೆ ಜಿಲ್ಲೆಯ ಉಸ್ತುವಾರಿ ಸಚಿವೆಯನ್ನಾಗಿ ನೇಮಿಸಿದಲ್ಲಿ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಪತಿಯವರ ಕನಸನ್ನು ನನಸು ಮಾಡಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಅದ್ದೂರಿ ಸ್ವಾಗತ: ಶಾಸಕಿಯಾಗಿ ಸಚಿವರಾದ ಬಳಿಕ ಪ್ರಥಮ ಬಾರಿಗೆ ಮಲೆ ಮಹದೇರ್ಶವರ ಬೆಟ್ಟಕ್ಕೆ ತೆರಳಲು ಆಗಮಿಸುತ್ತಿರುವ ಸಚಿವೆ ಗೀತಾ ಮಹಾದೇವಪ್ರಸಾದ್ ಅವರನ್ನು ಸ್ವಾಗತಿಸಲು ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೆಳಗ್ಗಿನಿಂದ ಸಜ್ಜಾಗಿ 4 ಗಂಟೆಯಿಂದ ಮುಖ್ಯವೃತ್ತದ ಬಳಿ ಜಮಾಯಿಸಿ ಕಾಯುತ್ತಿದ್ದರು. ಆದರೆ ಗುಂಡ್ಲುಪೇಟೆಯಲ್ಲಿನ ಶಿಕ್ಷಕರ ದಿನಾಚರಣೆ ಹಾಗೂ ಇನ್ನಿತರ ಕಾರ್ಯಕ್ರಮಗಳಿಂದಾಗಿ ರಾತ್ರಿ 8:15ರ ವೇಳೆಗೆ ಹನೂರು ಪಟ್ಟಣಕ್ಕೆ ಆಗಮಿಸಿದರು. ಈ ವೇಳೆ ಸಚಿವರು ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಪುಷ್ಪಮಾಲೆ ಹಾಕಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಚಿವರನ್ನು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಉಪಾಧ್ಯಕ್ಷ ಬಸವರಾಜು, ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ, ನಿರ್ದೇಶಕ ನಂಜುಂಡಪ್ರಸಾದ್, ಮಹದೇವಪ್ರಸಾದ್ ಪುತ್ರ ಗಣೇಶ್‍ಪ್ರಸಾದ್, ಪ.ಪಂ ಅಧ್ಯಕ್ಷೆ ಮಮತಾ ಮಹಾದೇವು, ಉಪಾಧ್ಯಕ್ಷ ಬಸವರಾಜು, ಮಾಜಿ ತಾ.ಪಂ ಅಧ್ಯಕ್ಷ ಮುರುಡೇಶ್ವರ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆಂಪಯ್ಯ, ತೋಟೇಶ್, ಕಂಠೀರವ ಸ್ಟುಡಿಯೋ ನಿರ್ದೇಶಕ ಪುಟ್ಟರಾಜು, ಮುಖಂಡರಾದ ಚಿಕ್ಕತಮ್ಮಯ್ಯ, ಮಾದೇಶ್, ನಟರಾಜು, ಪ್ರಶಾಂತ್ ಇನ್ನಿತರರು ಹಾಜರಿದ್ದರು.







