ಕಲಬೆರಕೆ ಕಾಳು ಮೆಣಸಿದ್ದರೆ ಕ್ರಮ ಕೈಗೊಳ್ಳಿ : ವಿರಾಜಪೇಟೆ ಬಿಜೆಪಿ ಸವಾಲು

ಮಡಿಕೇರಿ, ಸೆ.6 :ಕೊಡಗಿನ ಕಾಳು ಮೆಣಸಿನೊಂದಿಗೆ ವಿಯೆಟ್ನಾಂನ ಕಾಳು ಮೆಣಸು ಕಲಬೆರಕೆಯಾಗುತ್ತಿದ್ದರೆ ಆಹಾರ ಕಲಬೆರಕೆ ತಡೆ ಕಾಯ್ದೆಯಡಿ ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿರುವ ವಿರಾಜಪೇಟೆ ತಾಲ್ಲೂಕು ಬಿಜೆಪಿ, ಗೋಣಿಕೊಪ್ಪ ಎಪಿಎಂಸಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮಾಡಿರುವ ಟೀಕೆಗಳನ್ನು ಖಂಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಕೆ.ಅರುಣ್ ಭೀಮಯ್ಯ, ಕಾಂಗ್ರೆಸ್ ಪಕ್ಷದ ಮಂದಿ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವುದಕ್ಕಾಗಿ ಇತರರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾಳು ಮೆಣಸನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ವ್ಯವಸ್ಥೆ ಕಾಂಗ್ರೆಸ್ ಪಕ್ಷದ ಕೊಡುಗೆಯಾಗಿದೆ. ಬಿಜೆಪಿಯ ವಿರೋಧವನ್ನು ಲೆಕ್ಕಿಸದೆ ಅಂದಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿರುವುದೇ ಇಂದಿನ ಆಮದು ನೀತಿಗೆ ಕಾರಣವೆಂದು ಟೀಕಿಸಿದರು.
ಆಮದು ಕಾಯ್ದೆ ಪ್ರಕಾರ ಕಾಳುಮೆಣಸು ಆಮದನ್ನು ತಡೆಯಲು ಸಾಧ್ಯವಿಲ್ಲವೆಂದು ತಿಳಿದಿದ್ದರು ವಿನಾಕಾರಣ ಆರೋಪ ಮಾಡಲಾಗುತ್ತಿದೆ. ವ್ಯಾಪಾರಿಗಳು ತಮ್ಮ ಲಾಭಕ್ಕಾಗಿ ಕಾಳು ಮೆಣಸನ್ನು ಆಮದು ಮಾಡಿಕೊಂಡರೆ ಅದಕ್ಕೆ ಎಪಿಎಂಸಿ ಆಡಳಿತ ಮಂಡಳಿಯಾಗಲಿ, ಬಿಜೆಪಿಯಾಗಲಿ ಹೊಣೆಗಾರರಲ್ಲ.
ಆಮದು ಒಪ್ಪಂದಕ್ಕೆ ಸಹಿ ಮಾಡಿದ ಕಾಂಗ್ರೆಸ್ ಪಕ್ಷವೆ ನೇರ ಹೊಣೆ ಎಂದು ಆರೋಪಿಸಿದ ಅರುಣ್ ಭೀಮಯ್ಯ, ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸುವುದಾದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿಯವರ ಮನೆಯ ಮುಂದೆ ನಡೆಸಲಿ ಎಂದು ಒತ್ತಾಯಿಸಿದರು. ಕಾಳು ಮೆಣಸು ಆಮದಿಗೆ ಸಂಬಂಧಿಸಿದಂತೆ ಸಿಐಡಿ ತನಿಖೆÉಗೆ ಒತ್ತಾಯಿಸಿರುವ ಕಾಂಗ್ರೆಸ್ ಕ್ರಮವನ್ನು ಸ್ವಾಗತಿಸುವುದಾಗಿ ಅವರು ತಿಳಿಸಿದರು.
ರಾಜಕೀಯ ದುರುದ್ದೇಶದಿಂದ ಆರೊಪಗಳನ್ನು ಮಾಡುವುದನ್ನು ಬಿಟ್ಟು ಆಮದನ್ನು ತಡೆಯುವ ಬಗ್ಗೆ ಚಿಂತನೆ ಮಾಡಬೇಕಾಗಿದೆ. ಕೇರಳ ರಾಜ್ಯದಲ್ಲಿ ವಿಶ್ವದ ಎಲ್ಲಾ ದೇಶದ ಕಾಳು ಮೆಣಸು ಮುಕ್ತವಾಗಿ ಮಾರಾಟವಾಗುತ್ತಿದೆ. ಆದರೆ, ವಿಯೆಟ್ನಾಂ ದೇಶದ ಕಾಳು ಮೆಣಸಿಗೆ ಬೆಲೆ ತೀರಾ ಕಡಿಮೆ ಇದ್ದು, ಗುಣಮಟ್ಟ ಕೂಡ ಕಡಿಮೆ ಇದೆ. ಈ ಕಾಳು ಮೆಣಸು ಮಾರಾಟದಿಂದ ಹೆಚ್ಚಿನ ಲಾಭಗಳಿಸುವ ಉದ್ದೇಶದಿಂದ ವ್ಯಾಪಾರಿಗಳು ಇದನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ.
ಆಮದು ಕಾಯ್ದೆಯನ್ನು ವ್ಯಾಪಾರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ರೈತರಿಗೆ ಸಂಕಷ್ಟ ಎದುರಾಗಿದೆಯೆಂದು ಅರುಣ್ ಭೀಮಯ್ಯ ಸ್ಪಷ್ಟಪಡಿಸಿದರು. ಕಳೆದ ತಿಂಗಳು ಕೇಂದ್ರ ವಾಣಿಜ್ಯ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದಾಗ ಕಾಳುಮೆಣಸಿನ ಆಮದಿನಿಂದ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಬಿಜೆಪಿಯ ಹಿರಿಯ ಮುಖಂಡರ ನಿಯೋಗ ಮನವರಿಕೆ ಮಾಡಿಕೊಟ್ಟಿದೆ. ಕಳಪೆ ಗುಣಮಟ್ಟದ ವಿಯೆಟ್ನಾಂ ಕಾಳು ಮೆಣಸನ್ನು ಕಲಬೆರಕೆ ಮಾಡಿ ಕೊಡಗಿನ ಕಾಳು ಮೆಣಸೆಂದು ಮಾರಾಟ ಮಾಡುತ್ತಿರುವುದರಿಂದ ಉತ್ತಮ ಗುಣಮಟ್ಟದ ಕೊಡಗಿನ ಕಾಳು ಮೆಣಸಿಗೆ ಭಾರತಲ್ಲಿ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲು ಬೆಲೆ ಕುಸಿತವಾಗಿದೆ. ಕಲಬೆರಕೆ ಮಾಡುವ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಆಹಾರ ಕಲಬೆರಕೆ ತಡೆ ಕಾಯ್ದೆಯಡಿ ರಾಜ್ಯ ಸರ್ಕಾರವೆ ಕ್ರಮ ಕೈಗೊಳ್ಳಲಿ ಎಂದು ಅರುಣ್ ಭೀಮಯ್ಯ ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರಘ ನಾಣಯ್ಯ ಮಾತನಾಡಿ, ಕಾಂಗ್ರೆಸ್ಸಿಗರು ಹೋರಾಟ ನಡೆಸುವುದಾದರೆ ತಾಲ್ಲೂಕು ಕಛೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಹದಗೆಟ್ಟ ರಸ್ತೆಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವರ ಎದುರು ಪ್ರತಿಭಟನೆ ನಡೆಸಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ವೀರಾಜಪೇಟೆ ತಾಲ್ಲೂಕು ಉಪಾಧ್ಯಕ್ಷ ಮಾಚಮಾಡ ಸುಮಂತ್, ಮಡಿಕೇರಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಡೀನ್ ಬೋಪಣ್ಣ, ಹಾಗೂ ನಗರ ಯುವ ಮೋರ್ಚಾದ ಉಪಾಧ್ಯಕ್ಷರಾದ ಬಿ.ಪಿ. ಡಿಶು ಉಪಸ್ಥಿತರಿದ್ದರು.







