ಗೌರಿ ಲಂಕೇಶ್ ಹತ್ಯೆ ಖಂಡಿಸಿ ವಿವಿಧ ಸಂಘಟನೆಯಿಂದ ಪ್ರತಿಭಟನೆ

ಹಾಸನ, ಸೆ.6: ಹಿರಿಯ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಗೆ ಕಾರಣರಾದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಭಾರತ ಕಮ್ಯೂನಿಸ್ಟ್ ( ಸಿಪಿಐ), ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು, ಪ್ರಗತಿಪರ ಚಿಂತಕಿ, ಜನಪರ ಹೋರಾಟಗಾರ್ತಿ ಹಾಗೂ ಹಿರಿಯ ಪರ್ತಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಹಿಂದಿರುವ ಕೊಲೆಗಡುಕರನ್ನು ಸರ್ಕಾರ ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಗೌರಿ ಲಂಕೇಶ್ ಅವರು ಸಮಾಜದ ಒಳಿತಿಗೆ ದುಡಿಯುತ್ತಿದ್ದರು. ಅಂತಹವರನ್ನು ಗುಂಡಿಕ್ಕಿ ಕೊಂದಿರುವುದು ರಾಕ್ಷಸಿ ಒಂದು ಪ್ರವತಿ. ಇದರ ಹಿಂದೆ ಕೋಮುವಾದಿಗಳ ಕೈವಾಡ ಅಡಗಿರುವ ಸಂಶಯವಿದೆ. ವಿಚಾರವಾದಿಗಳನ್ನು ಹತ್ಯೆ ಮಾಡುವುದರಿಂದ ವಿಚಾರಧಾರೆಗಳು ನಶಿಸುವುದಿಲ್ಲ. ಅವು ಇನ್ನೂ ಗಟ್ಟಿಯಾಗುತ್ತವೆ ಎಂಬ ಸತ್ಯವನ್ನು ಪ್ಯಾಸಿಸ್ಟ್ ಮನೋಭಾವ ಹೊಂದಿದವರು ತಿಳಿಯಬೇಕು ಎಂದು ಹೇಳಿದರು. ರಾಜ್ಯ ಸರ್ಕಾರ ಕೂಡಲೇ ಈ ಹತ್ಯೆಯಲ್ಲಿ ಭಾಗಿಯಾಗಿರುವ ಹಂತಕರನ್ನು ಬಂಧಿಸಿ, ಉಗ್ರ ಶಿಕ್ಷೆ ಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಮಾನವ ಹಕ್ಕುಗಳ ಸಮಿತಿಯ ಮರಿ ಜೋಸೆಫ್, ದಲಿತ ಸಂಘರ್ಷ ಸಮಿತಿಯ ಅಬ್ದುಲ್ ಸಮದ್, ಹೆತ್ತೂರು ನಾಗರಾಜ್, ಖ್ಯಾತ ಕಲಾವಿದ ಕೆ ಟಿ ಶಿವಪ್ರಸಾದ್, ವಂದೇ ಮಾತರಂ ಸಂಸ್ಥಾಪಕ ಧರ್ಮರಾಜ್ ಕಡಗ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ಟೂರು ಶ್ರೀನಿವಾಸ್, ಕಾರ್ಯದರ್ಶಿ ಎಂ. ಸಿ. ಡೊಗ್ರೆ, ಲೇಖಕಿ ರೂಪ ಹಾಸನ್ ಇತರರು ಇದ್ದರು.







