ವೀನಸ್ ವಿಲಿಯಮ್ಸ್, ಸ್ಟೀಫನ್ಸ್ ಸೆಮಿ ಫೈನಲ್ಗೆ
ನ್ಯೂಯಾರ್ಕ್, ಸೆ.6: ಝೆಕ್ನ ಎರಡು ಬಾರಿಯ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೋವಾರನ್ನು ಮಣಿಸಿದ ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ಯುಎಸ್ ಚಾಂಪಿಯನ್ಶಿಪ್ನಲ್ಲಿ ಸೆಮಿ ಫೈನಲ್ಗೆ ತಲುಪಿದ್ದಾರೆ.
37ರ ಹರೆಯದ ವೀನಸ್ ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್ನಕ್ವಾರ್ಟರ್ ಫೈನಲ್ನಲ್ಲಿ 13ನೆ ಶ್ರೇಯಾಂಕದ ಕ್ವಿಟೋವಾರನ್ನು 6-3, 3-6, 7-6(7/2) ಸೆಟ್ಗಳಿಂದ ಮಣಿಸಿದ್ದಾರೆ.
ವೀನಸ್ ಯುಎಸ್ ಓಪನ್ನಲ್ಲಿ ಸೆಮಿ ಫೈನಲ್ ತಲುಪಿದ ಹಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 1994ರಲ್ಲಿ ಮಾರ್ಟಿನಾ ನವ್ರಾಟಿಲೋವಾ ವಿಂಬಲ್ಡನ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ್ದರು.
1997ರಲ್ಲಿ ಮೊದಲ ಬಾರಿ ಯುಎಸ್ ಓಪನ್ನಲ್ಲಿ ಭಾಗವಹಿಸಿದ್ದ ವೀನಸ್ ಇದೀಗ ಈ ಟೂರ್ನಿಯಲ್ಲಿ 20 ವರ್ಷ ಪೂರೈಸಿದ್ದಾರೆ. ಯುಎಸ್ ಓಪನ್ನಲ್ಲಿ ಮೂರನೆ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. 2000 ಹಾಗೂ 2001ರಲ್ಲಿ ವೀನಸ್ ಸತತ ಪ್ರಶಸ್ತಿಯನ್ನು ಜಯಿಸಿದ್ದರು.
ವೀನಸ್ ಗುರುವಾರ ನಡೆಯಲಿರುವ ಸೆಮಿ ಫೈನಲ್ನಲ್ಲಿ ತಮ್ಮದೇ ದೇಶದ ಸ್ಟೀಫನ್ಸ್ರನ್ನು ಎದುರಿಸಲಿದ್ದಾರೆ. ಸ್ಟೀಫನ್ಸ್ರನ್ನು ಮಣಿಸಿದರೆ ಶನಿವಾರ ನಡೆಯಲಿರುವ ಫೈನಲ್ಗೆ ಲಗ್ಗೆ ಇಡಲಿದ್ದಾರೆ. ಈ ವರ್ಷ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್ ಟೂರ್ನಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದ ವೀನಸ್ 2002ರ ಬಳಿಕ ಒಂದೇ ಋತುವಿನಲ್ಲಿ ಮೂರು ಗ್ರಾನ್ಸ್ಲಾಮ್ ಫೈನಲ್ ತಲುಪಿದ ಸಾಧನೆ ಮಾಡುವತ್ತ ಹೆಜ್ಜೆ ಇಟ್ಟಿದ್ದಾರೆ. ಇದೇ ವೇಳೆ 83ನೆ ರ್ಯಾಂಕಿನ ಸ್ಟೀಫನ್ಸ್ ಲಾಟ್ವಿಯದ 16ನೆ ಶ್ರೇಯಾಂಕದ ಅನಸ್ಟಸಿಜಾ ಸೆವಾಸ್ಟೋವಾರನ್ನು 6-3, 6-3, 7-6(7/2) ಸೆಟ್ಗಳಿಂದ ಮಣಿಸಿದ್ದಾರೆ.