‘ಗೌರಿ ಲಂಕೇಶ್ ಹತ್ಯೆ’ ನಿಷ್ಪಕ್ಷಪಾತ ಪತ್ರಿಕೋದ್ಯಮದ ಕೊಲೆ: ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ
ಬೆಂಗಳೂರು, ಸೆ.7: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯು ನಿಷ್ಪಕ್ಷಪಾತ ಪತ್ರಿಕೋದ್ಯಮದ ಕೊಲೆಯಾಗಿದೆ ಎಂದು ಜಮೀಯತೆ ಉಲೇಮಾ ಹಿಂದ್ ಕರ್ನಾಟಕದ ಅಧ್ಯಕ್ಷ ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ನಗರದ ಕಮರ್ಷಿಯಲ್ ಸ್ಟ್ರೀಟ್ನಲ್ಲಿರುವ ಫಿರೋಝ್ ವೈಟ್ ಮ್ಯಾನರ್ನಲ್ಲಿ ವಿವಿಧ ಮುಸ್ಲಿಮ್ ಸಂಘಟನೆಗಳು ಹಾಗೂ ಉಲೇಮಾಗಳು ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಜಾತ್ಯತೀತ ತತ್ವವನ್ನು ಜೀವಂತವಾಗಿಟ್ಟಿರುವ ಜನರ ಪೈಕಿ ಗೌರಿ ಲಂಕೇಶ್ ಅವರು ಒಬ್ಬರು. ಸತ್ಯದ ಪತ್ರಿಪಾದನೆ ಮಾಡುತ್ತಿದ್ದ ಅವರು, ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯುವ, ಮಾನವೀಯತೆಗಾಗಿ ದುಡಿಯುವ ದಿಟ್ಟ ಮಹಿಳೆಯಾಗಿದ್ದರು ಎಂದು ಹೇಳಿದರು.
ಗೌರಿ ಲಂಕೇಶ್ರನ್ನು ಹತ್ಯೆ ಮಾಡುವ ಮೂಲಕ ಅವರ ಶತ್ರುಗಳು, ಯಾವ ಹಂತಕ್ಕೆ ಬೇಕಾದರೂ ನಾವು ಹೋಗಲು ಸಿದ್ಧವಾಗಿದ್ದೇವೆ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಕೋಮುವಾದಿ ಶಕ್ತಿಗಳ ಬಲ ಹೆಚ್ಚಾಗುತ್ತಿದೆ. ನಮ್ಮ ರಾಜ್ಯದಲ್ಲಿ ಜಾತ್ಯತೀತ ಎಂದು ಕರೆಸಿಕೊಳ್ಳುವ ಸರಕಾರದ ಆಡಳಿತದಲ್ಲಿಯೂ ಅವರಿಗೆ ಬೆಂಬಲ ಸಿಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರವು ಕೋಮು ವಿಭಜಕ ಶಕ್ತಿಗಳ ಚಟುವಟಿಕೆಗಳ ಕುರಿತು ಗಮನ ಹರಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಗೌರಿ ಲಂಕೇಶ್ ಹಂತಕರನ್ನು ಹಿಡಿದು ಶಿಕ್ಷೆಗೊಳಪಡಿಸಬೇಕು. ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ರಾಜ್ಯ ಹಾಗೂ ದೇಶದ ಇತರ ಭಾಗಗಳಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಜಮೀಯತೆ ಉಲೇಮಾ ಸೇರಿದಂತೆ ಎಲ್ಲ ಮುಸ್ಲಿಮ್ ಸಂಘಟನೆಗಳು ಬೆಂಬಲ ನೀಡುತ್ತಿವೆ. ಅಲ್ಲದೆ, ಶೀಘ್ರವೇ ಮುಸ್ಲಿಮ್ ಸಂಘಟನೆಗಳ ನಿಯೋಗವು ಅವರ ಕುಟುಂಬ ವರ್ಗವನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ ಎಂದು ತಿಳಿಸಿದರು.
ಸಭೆಯಲ್ಲಿ ವೌಲಾನ ಶಬ್ಬೀರ್ಅಹ್ಮದ್ ನದ್ವಿ, ವೌಲಾನ ವಹೀದುದ್ದೀನ್ಖಾನ್, ಯೂಸುಫ್ ಕನ್ನಿ, ಜಮೀಯತೆ ಉಲೇಮಾ, ಜಮಾಅತೆ ಇಸ್ಲಾಮಿ ಹಿಂದ್, ಪಯಾಮೆ ಇನ್ಸಾನಿಯತ್, ಮಜ್ಲಿಸೆ ಉಲೇಮಾ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.







