ಗೌರಿ ಲಂಕೇಶ್ ಹತ್ಯೆ ಪ್ರಕರಣ: ಹಂತಕರನ್ನು ಬಂಧಿಸಲು ಆಗ್ರಹಿಸಿ ಸೆ.11ರಂದು ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರು, ಸೆ.7: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ವಿಳಂಬ ಮಾಡದೆ, ಶೀಘ್ರ ಹಂತಕರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಕನ್ನಡ ಒಕ್ಕೂಟದಿಂದ ಸೆ.11ರಂದು ರಾಜ್ಯಾದ್ಯಂತ ಪ್ರತಿಭಟನೆ ಕರೆ ನೀಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೌರಿ ಲಂಕೇಶ್‌ರ ಹತ್ಯೆ ಅತ್ಯಂತ ಅಮಾನುಷ. ನೇರವಾಗಿ ಎದುರಿಸಲಾಗದವರು ಇಂತಹ ಅನಾಗರಿಕ ಮತ್ತು ನಾಚಿಗೇಡಿನ ಕೊಲೆ ಮಾಡಿದ್ದಾರೆ. ಗೌರಿ ಲಂಕೇಶ್‌ರ ವಿಚಾರಧಾರೆಗಳ ಬಗ್ಗೆ ವಿರೋಧವಿದ್ದವರು ಸಾರ್ವಜನಿಕವಾಗಿ ಪ್ರಶ್ನೆ ಮಾಡಬೇಕಿತ್ತು. ಅದು ಬಿಟ್ಟು ಇಂತಹ ಕೃತ್ಯ ಎಸಗಿರುವುದು ಸಮಂಜಸವಲ್ಲ ಎಂದು ಆಕ್ಷೇಪಿಸಿದರು.
ವಿಶ್ವದಲ್ಲಿ ಬಂದೂಕಿನ ದಾಳಿ ನಡೆಸಿದ ಯಾರೊಬ್ಬರೂ ಯಶಸ್ಸು ಸಾಧಿಸಿಲ್ಲ. ಆದರೆ, ಮಹಿಳೆ ಎಂಬ ಕಳಕಳಿಯಿಲ್ಲದೆ ಹತ್ಯೆ ನಡೆಸಿದ್ದಾರೆಂದ ಅವರು, ರಾಜ್ಯ ಸರಕಾರ ಈ ಪ್ರಕರಣವನ್ನು ಮೂಲೆ ಗುಂಪು ಮಾಡುವುದನ್ನು ತಪ್ಪಿಸಬೇಕು. ಈ ಹಿಂದೆ ಕಲಬುರ್ಗಿ ಹತ್ಯೆಯಾಗಿ ಎರಡು ವರ್ಷ ಕಳೆಯುತ್ತಿದ್ದು, ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಕಿಡಿಕಾರಿದರು.
ತಿಂಗಳೊಳಗೆ ನ್ಯಾಯ ಸಿಗಬೇಕು: ಕಲಬುರ್ಗಿ ಹತ್ಯೆ ಮಾಡಿದವರನ್ನು ಹಿಡಿಯಲು ಸಾಧ್ಯವಾಗಿಲ್ಲ. ಅದೇ ರೀತಿ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಸರಕಾರ ಮುಂದಾಗಬಾರದು. ತಿಂಗಳೊಳಗೆ ಹತ್ಯೆ ಮಾಡಿದವರನ್ನು ಪತ್ತೆ ಮಾಡಬೇಕು ಹಾಗೂ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಸೆ. 11 ರಂದು ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ರಾಮನಗರ, ಮಂಡ್ಯದ ಮೂಲಕ ಮೈಸೂರಿನವರೆಗೆ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಎರಡು ಸಾವಿರಕ್ಕೂ ಅಧಿಕ ಕನ್ನಡ ಪರ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಪ್ರವೀಣ್‌ಕುಮಾರ್ ಶೆಟ್ಟಿ, ಶಿವರಾಮೇಗೌಡ, ಕೆ.ಆರ್.ಕುಮಾರ್, ಸುರೇಶ್‌ಗೌಡ, ಮಂಜುನಾಥ್‌ಯಾದವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







