9 ಮಂದಿ ವಿಚಾರಣಾ ಮುಖ್ಯಸ್ಥರ ಅಗತ್ಯವಿದೆ: ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥಶೆಟ್ಟಿ
ಬೆಂಗಳೂರು, ಸೆ.7: ಲೋಕಾಯುಕ್ತ ಸಂಸ್ಥೆಗೆ ಒಂಬತ್ತು ವಿಚಾರಣಾ ಮುಖ್ಯಸ್ಥರ ಅಗತ್ಯವಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಹೇಳಿದ್ದಾರೆ.
ಗುರುವಾರ ನಗರದ ಕೆಜಿ ರಸ್ತೆಯ ಬೆಂ.ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಂ.ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅಧಿಕಾರಿಗಳೊಂದಿಗೆ ಕಾರ್ಯವೈಖರಿ ಬಗ್ಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲೋಕಾಯುಕ್ತ ಸಂಸ್ಥೆಗಿರುವ ಕೆಲ ವ್ಯಾಪ್ತಿಯನ್ನು ಎಸಿಬಿಗೆ ನೀಡಿದರೂ, ಲೋಕಾಯುಕ್ತಕ್ಕೆ ಅದರದೇ ಆದ ಅಧಿಕಾರವಿದೆ ಎಂದರು.
ಅಧಿಕಾರಿ ವರ್ಗದವರು ತಪ್ಪು ಮಾಡಿದರೆ ಅವರ ವಿರುದ್ಧ ತನಿಖೆ ನಡೆಸಲು ಲೋಕಾಯುಕ್ತ ಸಂಸ್ಥೆಯಲ್ಲಿ ಅಧಿಕಾರಿಗಳ ಕೊರತೆಯಿರುವ ಹಿನ್ನೆಲೆಯಲ್ಲಿ 9 ವಿಚಾರಣಾ ಮುಖ್ಯಸ್ಥರನ್ನು ಸಂಸ್ಥೆಗೆ ನೀಡಬೇಕು ಎಂದು ಈಗಾಗಲೇ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿದೆ. ಇದಕ್ಕೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಹೇಳಿದರು.
ಅಧಿಕಾರಿ ವರ್ಗದವರು ತಪ್ಪು ಮಾಡಿದರೆ, ದುರಾಡಳಿತ ಮಾಡಿದರೆ ಅಂತಹ ಪ್ರಕರಣಗಳನ್ನು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಸೂಕ್ತ ತನಿಖೆ ನಡೆಸಲಾಗುತ್ತದೆ. ಆಡಳಿತ ವ್ಯವಸ್ಥೆಗೆ ತೊಂದರೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವನಾಥಶೆಟ್ಟಿ ನುಡಿದರು.
6 ಸಾವಿರಕ್ಕೂ ಹೆಚ್ಚು ಪ್ರಕರಣ: ಲೋಕಾಯುಕ್ತದಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿದೆ. ಆದರೆ, ಈ ಪ್ರಕರಣವನ್ನು ಇತ್ಯರ್ಥಪಡಿಸಲು ಲೋಕಾಯುಕ್ತ ಸಂಸ್ಥೆ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ ಎಂದ ಅವರು, ಅಕ್ರಮಗಳು ನಡೆದಿರುವುದು ಸಾಬೀತಾದರೆ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರ ಲೋಕಾಯುಕ್ತಕ್ಕಿದೆ. ಎಸಿಬಿ ಅಧಿಕಾರಿಗಳು ಅನಾಮದೇಯವಾಗಿ ಪ್ರಕರಣ ದಾಖಲಿಸಿದರೆ ಈ ಬಗ್ಗೆ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಬಹುದು ಎಂದರು.
‘ಗೌರಿ ಹಂತಕರನ್ನು ಪತ್ತೆ ಹಚ್ಚುತ್ತಾರೆ’
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿರುವುದು ಖಂಡನೀಯವಾಗಿದೆ. ಪ್ರಜಾಪ್ರಭುತ್ವದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ಪಡುವುದು ಸಹಜ. ನಮಗೆ ಬೇಕಾಗಿರುವುದನ್ನು ತೆಗೆದುಕೊಂಡು ಬೇಡದಿರುವುದನ್ನು ಬಿಟ್ಟುಬಿಡಬೇಕು. ಹತ್ಯೆ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಪತ್ತೆಹಚ್ಚುತ್ತಾರೆ ಎಂಬ ನಂಬಿಕೆಯಿದೆ.
-ಪಿ.ವಿಶ್ವನಾಥ ಶೆಟ್ಟಿ, ಲೋಕಾಯುಕ್ತ ನ್ಯಾಯಮೂರ್ತಿ







