ಕಾನೂನು ಸುವ್ಯವಸ್ಥೆಗೆ ಭಂಗ ತರಲು ಬಿಜೆಪಿ ಯತ್ನ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಸೆ.7: ರಾಜ್ಯದಲ್ಲಿ ಬಿಜೆಪಿ ನಾಯಕರು ಮಂಗಳೂರು ಚಲೋ ಮೂಲಕ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಹಾಗೂ ಕೋಮು ಭಾವನೆಯನ್ನು ಕೆರಳಿಸುವಂತಹ ಉದ್ದೇಶವನ್ನಿಟ್ಟುಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರ್ಯಾಲಿಯನ್ನು ಜಿಲ್ಲಾ ಆಡಳಿತ ಮತ್ತು ಸರಕಾರ ಸಮರ್ಪಕವಾಗಿ ನಿಭಾಯಿಸಿದೆ. ಬಿಜೆಪಿಯವರ ಬಣ್ಣ ಬಯಲಾಗಿದೆ ಎಂದರು.
ಬಿಜೆಪಿಯವರು ಸಮಾವೇಶ ನಡೆಸಲು ನಮ್ಮ ತಕರಾರಿಲ್ಲ. ಸರಕಾರದ ತಪ್ಪುಗಳಿದ್ದರೆ ಸಮಾವೇಶ ಮಾಡಿ ಅದನ್ನು ಜನರ ಮುಂದೆ ಇಡಲಿ. ಅದು ಬಿಟ್ಟು ರ್ಯಾಲಿ ಮಾಡಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ನಾವು ಅವಕಾಶ ಮಾಡಿಕೊಡುವುದಿಲ್ಲ. ಕಾನೂನು ಬದ್ಧವಾಗಿ ಏನು ಮಾಡಲು ಅವಕಾಶವಿದೆಯೋ ಅದಕ್ಕೆ ಗೃಹ ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಕಾನೂನು ಮುರಿದು ಸರಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ಪ್ರಯತ್ನಿಸಿದರೆ ಕಾನೂನು ರೀತಿಯಲ್ಲೇ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ರಾಜ್ಯದ ಜನರು ಪ್ರಬುದ್ಧರಾಗಿದ್ದಾರೆ ಹಾಗೂ ಪ್ರಜ್ಞಾವಂತರಿದ್ದು ಇವರ ರಥಯಾತ್ರೆಗಳು, ರ್ಯಾಲಿಗಳನ್ನು ಈಗಾಗಲೇ ನೋಡಿದ್ದಾರೆ. ಈ ರ್ಯಾಲಿ ರಾಜಕೀಯ ಪ್ರೇರಿತ ಹಾಗೂ ಸಾರ್ವಜನಿಕ ಹಿತಾಸಕ್ತಿ ಹೊಂದಿಲ್ಲ ಎಂಬುದು ಜನತೆಗೆ ಗೊತ್ತಿದೆ. ಹೀಗಾಗಿ ಬಿಜೆಪಿಗೆ ಜನ ಬೆಂಬಲ ಸಿಕ್ಕಿಲ್ಲ. ಇನ್ನು ಮುಂದೆಯೂ ಸಿಗುವುದಿಲ್ಲ. ರಾಜ್ಯದ ಜನ ಮುಂದಿನ ದಿನಗಳಲ್ಲಿಯೂ ಪುನಃ ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಎಂದು ಹೇಳಿದರು.
ಗೌರಿ ಲಂಕೇಶ್ ಹತ್ಯೆ ಸಂಬಂಧ ತನಿಖೆ ಪ್ರಗತಿಯಲ್ಲಿದೆ. ಆದಷ್ಟು ಶೀಘ್ರವಾಗಿ ಅಪರಾಧಿಗಳು ಸಿಗುವ ವಿಶ್ವಾಸವಿದೆ. ಸಿಐಡಿಯ ಇತಿಹಾಸದಲ್ಲೇ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ತನಿಖೆಗೆ ನಿಯೋಜಿಸಿದಷ್ಟು ಅಧಿಕಾರಿಗಳನ್ನು ಯಾವ ತನಿಖೆಗೂ ನಿಯೋಜಿಸಿಲ್ಲ ಎಂದ ಅವರು, ದಾಭೋಲ್ಕರ್ ಹತ್ಯೆಗೂ ಕಲಬುರ್ಗಿ ಹತ್ಯೆಗೂ ಸಾಮ್ಯತೆ ಇದ್ದು, ಒಂದೇ ರಿವಾಲ್ವರ್ ಬಳಸಿದ್ದ ಬಗ್ಗೆಯೂ ತನಿಖೆ ನಡೆಯುತ್ತಿದೆ. ತನಿಖಾ ತಂಡ ನೇಪಾಳದವರೆಗೆ ಹೋಗಿ ಬಂದಿದೆ. ಆದರೆ, ಕಲಬುರ್ಗಿ ಹತ್ಯೆ ಮಾಡಿದವರೆ ಗೌರಿಯವರನ್ನು ಹತ್ಯೆ ಮಾಡಿದ್ದಾರೆಂದು ಈಗಲೇ ಹೇಳುವುದು ಕಷ್ಟ ಎಂದು ಅವರು ಹೇಳಿದರು.







