ಪ್ರೊ.ಇಜಾಝುದ್ದೀನ್ ಸೌಹಾರ್ದ ಶಿಲ್ಪಿ: ಶಿವರುದ್ರ ಸ್ವಾಮಿ

ಬೆಂಗಳೂರು, ಸೆ.7: ನಾಡಿಗೆ ಅತ್ಯಗತ್ಯವಾಗಿರುವ ಸಾಮರಸ್ಯವನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಬಂದಿದ್ದ ಪ್ರೊ.ಇಜಾಝುದ್ದೀನ್ ನಿಜಕ್ಕೂ ಸೌಹಾರ್ದ ಶಿಲ್ಪಿ ಎಂದು ಬೇಲಿಮಠದ ಶ್ರೀ ಶಿವರುದ್ರಸ್ವಾಮಿ ಬಣ್ಣಿಸಿದರು.
ಗುರುವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಖಿಲ ಕರ್ನಾಟಕ ಮಹಮದೀಯರ ವೇದಿಕೆಯು ಕನ್ನಡ ಶ್ರೀಸಾಮಾನ್ಯರ ಕೂಟದ ಸಹಯೋಗ ದೊಂದಿಗೆ ಆಯೋಜಿಸಿದ್ದ ‘ಸೌರ್ಹಾದ ಶಿಲ್ಪಿ ಪ್ರೊ.ಇಜಾಝುದ್ದೀನ್ ನುಡಿನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆತ್ಮವಿಶ್ವಾಸದಲ್ಲಿ ಕ್ರಿಯಾಶಕ್ತಿಯಿದೆ ಎಂದು ನಂಬಿದ್ದ ಇಜಾಝುದ್ದೀನ್, ಅದರಿಂದಲೇ ಪ್ರೀತಿ, ವಿಶ್ವಾಸ, ಗೌರವ ಎಲ್ಲವನ್ನೂ ಪಡೆದು ಇತರರಿಗೂ ಮಾದರಿಯಾದರು. ಕೇವಲ ನುಡಿಯೊಳಗೆ ಸೀಮಿತವಾಗದೆ, ತಮ್ಮ ಆಚರಣೆಯಲ್ಲಿಯೂ ನಿಜವಾದ ಸಾಮರಸ್ಯದ ಸಂಕೇತವಾಗಿದ್ದರು ಎಂದು ಶಿವರುದ್ರಸ್ವಾಮಿ ಸ್ಮರಿಸಿಕೊಂಡರು.
ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ ಮಾತನಾಡಿ, ಶಿಷ್ಯರ ಪ್ರೀತಿ ಆದರಗಳಿಗೆ ಪಾತ್ರವಾಗಿದ್ದ ಅಪರೂಪದ ಪ್ರಾಧ್ಯಾಪಕ ಇಜಾಝಾದ್ದೀನ್. ಅವರನ್ನು ಗುರುತಿಸಿ ರಾಮಕೃಷ್ಣ ಹೆಗಡೆ ತಮ್ಮ ಅಧಿಕಾರವಧಿಯಲ್ಲಿ ವಿಧಾನಪರಿಷತ್ತಿನ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದ್ದರು ಎಂದರು.
ಸೂಫಿ ಪಂಥದಿಂದ ಈ ದೇಶದಲ್ಲಿ ಭಕ್ತಿ ಭಾವಗಳು ಹರಿದು ಬಂದವು. ಅಂತಹ ಮಹಾನ್ ಸೂಫಿ ಸಂತ ಇಜಾಝುದ್ದೀನ್ ಭಕ್ತಿಯ ಬೆಳೆಯನ್ನು ಬೆಳೆಸಿದ ಮೇಳೈಸಿದ ಅಪ್ರತಿಮ ವಾಗ್ಮಿ ಎಂದರು.
ಶಿಕ್ಷಣ ತಜ್ಞ ಡಾ.ಟಿ.ಎನ್.ಚಂದ್ರಕಾಂತ್ ಮಾತನಾಡಿ, ಇಜಾಝುದ್ದೀನ್ ಸ್ಮರಣಾರ್ಥ ನಾಡಿನ ಸೌಹಾರ್ದತೆಗೆ ಶ್ರಮಿಸುವ ಮಹನೀಯರನ್ನು ಗುರುತಿಸಿ ಪ್ರತಿವರ್ಷ ಒಂದು ಪ್ರಶಸ್ತಿಯನ್ನು ಸ್ಥಾಪಿಸಬೇಕು ಕರೆ ನೀಡಿದರು.
ಶಾಸಕ ಡಾ.ಅಶ್ವತ್ಥನಾರಾಯಣ ಮಾತನಾಡಿ, ಇಜಾಝುದ್ದೀನ್ ಸ್ಮರಣೆಯಲ್ಲಿ ವಿಶ್ವವಿದ್ಯಾನಿಲಯದಲ್ಲಿ ಪೀಠವನ್ನು ಸ್ಥಾಪಿಸಲು ಎಲ್ಲ ಬಗೆಯ ಪ್ರಯತ್ನ ಮಾಡಲಾಗುವುದು. ತಪಸ್ವಿಯ ಜೀವನ ನಡೆಸುತ್ತಾ ಸಮಾಜಕ್ಕೆ ಅಗತ್ಯವಾದ ಸಾಮರಸ್ಯದ ಸಂದೇಶವನ್ನು ನೀಡಿದ ಮಹಾನುಭಾವ ಎಂದು ಕೊಂಡಾಡಿದರು.
ಕಾರ್ಯಕ್ರಮದಲ್ಲಿ ಕವಯತ್ರಿ ಹಾಜಿರಾ ಖಾನಂ ಇಜಾಝುದ್ದೀನ್ ಕುರಿತಾದ ಕವನವನ್ನು ವಾಚಿಸಿದರು. ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರ.ದೇ. ಪಾರ್ಶ್ವನಾಥ, ಮಹಮದೀಯರ ಕನ್ನಡ ವೇದಿಕೆಯ ಅಧ್ಯಕ್ಷ ಸಮೀಉಲ್ಲಾಖಾನ್, ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿನಾಕಪಾಣಿ, ಇಜಾಝುದ್ದೀನ್ ಅವರ ಬಾಲ್ಯದ ಸಹಪಾಠಿಗಳಾದ ತುಡಾ ಮಾಜಿ ಅಧ್ಯಕ್ಷ ಶಿವಮೂರ್ತಿ, ತುಮಕೂರು ಛೇಂಬರ್ಸ್ ಆಫ್ ಕಾಮರ್ಸ್‌ನ ಕಾರ್ಯದರ್ಶಿ ಅಬ್ದುಲ್ ಜಲೀಲ್, ವಕ್ಫ್ ಕೌನ್ಸಿಲ್ ನಿರ್ದೇಶಕ ನಜೀರ್ ಉಪಸ್ಥಿತರಿದ್ದರು.







