ತೀರ್ಪಿಗೆ ಮುನ್ನ ಹಿಂಸಾಚಾರ ಪ್ರಚೋದಿಸಲು ಐದು ಕೋ.ರೂ.ನೀಡಿದ್ದ ಡೇರಾ ಸಚ್ಚಾ ಸೌದಾ

ಪಂಚಕುಲಾ,ಸೆ.7: ಅತ್ಯಾಚಾರ ಪ್ರಕರಣಗಳಲ್ಲಿ ಗುರ್ಮೀತ್ ಸಿಂಗ್‌ನನ್ನು ಅಪರಾಧಿಯೆಂದು ಸಿಬಿಐ ವಿಶೇಷ ನ್ಯಾಯಾಲಯವು ಘೋಷಿಸಿದ ಬಳಿಕ ಪಂಚಕುಲಾ ದಲ್ಲಿ ಹಿಂಸಾಚಾರ ಭುಗಿಲೇಳುವಂತೆ ಮಾಡಲು ಡೇರಾ ಸಚ್ಚಾ ಸೌದಾ ಕನಿಷ್ಠ ಐದು ಕೋ.ರೂ.ಗಳನ್ನು ನೀಡಿತ್ತು ಎಂದು ವಿಶೇಷ ತನಿಖಾ ತಂಡ(ಸಿಟ್)ವು ಗುರುವಾರ ಬಹಿರಂಗಗೊಳಿಸಿದೆ. ಡೇರಾದ ಪ್ರಮುಖ ಸದಸ್ಯರಾದ ಆದಿತ್ಯ ಇನ್ಸಾನ್, ಹನಿಪ್ರೀತ್ ಇನ್ಸಾನ್ ಮತ್ತು ಸುರೇಂದರ್ ಧಿಮಾನ್ ಇನ್ಸಾನ್ ಅವರನ್ನೊಳಗೊಂಡ ಹಿಂಸಾಚಾರ ಪ್ರಕರಣದ ತನಿಖೆಯನ್ನು ಸಿಟ್ ನಡೆಸುತ್ತಿದೆ.
ಡೇರಾ ಆಡಳಿತದಿಂದ ಹಣವನ್ನು ಪಡೆದುಕೊಂಡು ಅದನ್ನು ಹಂಚುವಲ್ಲಿ ಡೇರಾದ ಪಂಚಕುಲಾ ಶಾಖೆಯ ಮುಖ್ಯಸ್ಥ ಚಮಕೌರ್ ಸಿಂಗ್ ಪ್ರಮುಖ ಪಾತ್ರವನ್ನು ವಹಿಸಿದ್ದ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಮೊಹಾಲಿ ಜಿಲ್ಲೆಯ ಧಾಕೋಲಿ ನಿವಾಸಿಯಾಗಿರುವ ಚಮಕೌರ್ ಆ.28ರಂದು ಉಚ್ಚ ನ್ಯಾಯಾಲಯದ ನಿರ್ದೇಶದಂತೆ ತನ್ನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾದ ಬಳಿಕ ಕುಟುಂಬ ಸಹಿತ ನಾಪತ್ತೆಯಾಗಿದ್ದಾನೆ.
ಗುರ್ಮೀತ್ ವಿರುದ್ಧ ತೀರ್ಪು ಹೊರಬಿದ್ದ ಬಳಿಕ ಹಿಂಸಾಚಾರ ಭುಗಿಲ್ಲೆದ್ದಿದ್ದ ಪಂಜಾಬ್‌ನ ವಿವಿಧ ಸ್ಥಳಗಳಿಗೂ ಡೇರಾದಿಂದ ಹಣ ರವಾನೆಯಾಗಿತ್ತು. ಹಿಂಸಾಚಾರದ ವೇಳೆ ಪ್ರಾಣ ಕಳೆದುಕೊಂಡರೆ ಕುಟುಂಬಕ್ಕೆ ಪರಿಹಾರವನ್ನು ನೀಡುವುದಾಗಿಯೂ ಡೇರಾ ಅನುಯಾಯಿಗಳಿಗೆ ತಿಳಿಸಲಾಗಿತ್ತು ಎಂದು ಮೂಲಗಳು ಹೇಳಿದವು.
ಚಮಕೌರ್ ಬಂಧನದ ಬಳಿಕ ಹೆಚ್ಚಿನ ವಿವರಗಳು ಹೊರಬೀಳಲಿವೆ. ಆತನ ಸಂಭಾವ್ಯ ಅಡಗುದಾಣಗಳ ಮೇಲೆ ನಮ್ಮ ತಂಡಗಳು ದಾಳಿಗಳನ್ನು ನಡೆಸುತ್ತಿವೆ ಎಂದು ಹರ್ಯಾಣ ಡಿಜಿಪಿ ಬಿ.ಎಸ್.ಸಂಧು ತಿಳಿಸಿದರು.
ಹಿಂಸಾಚಾರದ ಹಿಂದಿದ್ದ ಅಥವಾ ಬೆಂಬಲ ನೀಡಿದ್ದ ಇನ್ನೂ ಕೆಲವರ ಮೇಲೆ ಪೊಲೀಸರು ನಿಗಾಯಿರಿಸಿದ್ದಾರೆ. ಈ ಪೈಕಿ ಓರ್ವ ಪ್ರಮುಖ ವ್ಯಕ್ತಿ ತೋಟಗಾರಿಕೆ ವಿಜ್ಞಾನಿ ಯಾಗಿದ್ದು, ಹಿಂಸಾಚಾರವನ್ನು ಪ್ರಚೋದಿಸಲು ಈತನೂ ಹಣವನ್ನು ನೀಡಿದ್ದ ಎಂಬ ಬಲವಾದ ಶಂಕೆಯಿದೆ ಎಂದರು.







