ಸರಕಾರ ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ತಡೆ
ಸಾಮಾನ್ಯ ವಲಯ ವರ್ಗೀಕರಣ ನಿಯಮಗಳ ಕರಡು ರೂಪಿಸಿ

ಬೆಂಗಳೂರು, ಆ.7: ಸ್ಥಳೀಯ ಯೋಜನಾ ಪ್ರದೇಶಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ವಲಯ ವರ್ಗೀಕರಣ ನಿಯಮಗಳ ಕರಡು ರೂಪಿಸಿ ರಾಜ್ಯ ಸರಕಾರ ಇದೇ ಜುಲೈನಲ್ಲಿ ಹೊರಡಿಸಿದ್ದ ಅಧಿಸೂಚನೆಗೆ ಹೈಕೋರ್ಟ್ ಗುರುವಾರ ತಡೆಯಾಜ್ಞೆ ನೀಡಿದೆ.
ಸರಕಾರದ ಅಧಿಸೂಚನೆ ಪ್ರಶ್ನಿಸಿ ಸಿಟಿಜನ್ ಆ್ಯಕ್ಷನ್ ಫೋರಂ ಎಂಬ ಸಂಸ್ಥೆ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಅವರಿದ್ದ ವಿಭಾಗೀಯ ಪೀಠ, ನಿಯಮಗಳನ್ನು ಅಂತಿಮಗೊಳಿಸುವುದರಿಂದ ರಾಜ್ಯ ಸರಕಾರ ಮತ್ತು ನಗರಾಭಿವೃದ್ಧಿ ಇಲಾಖೆಯ ಅಧಿಸೂಚನೆಯನ್ನು ತಡೆ ಹಿಡಿದು ಆದೇಶಿಸಿದೆ. ಜತೆಗೆ, ರಾಜ್ಯ ಸರಕಾರ ಮತ್ತು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶದ ಅಭಿವೃದ್ಧಿಗೆ ಸಂಬಂಧಪಟ್ಟ ಯೋಜನೆ ಹಾಗೂ ಕರಡು ಯೋಜನೆ ರೂಪಿಸುವ ಅಧಿಕಾರ ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಸಮಿತಿ ಹೊಂದಿದೆ. ಆದರೆ, ಸಾಮಾನ್ಯ ವಲಯ ವರ್ಗೀಕರಣ ನಿಯಮಗಳು ಸ್ಥಳೀಯ ಪ್ರದೇಶಗಳಿಗೆ ಅನ್ವಯಿಸುತ್ತದೆ. ಆದರೆ, ಈ ಸಾಮಾನ್ಯ ವಲಯ ವರ್ಗೀಕರಣ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ಸರಕಾರ ಹೊಂದಿಲ್ಲ. ಮೇಲಾಗಿ ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಸಮಿತಿಯೊಂದಿಗೆ ಚರ್ಚಿಸದೆ, ಅದರ ಸಲಹೆ ಹಾಗೂ ಸೂಚನೆಗಳನ್ನು ಪಡೆಯದೆ ರಾಜ್ಯ ಸರಕಾರವು ಎಲ್ಲಾ ಸ್ಥಳೀಯ ಯೋಜನಾ ಪ್ರದೇಶಗಳಿಗೆ ಅನ್ವಯಿಸುವಂತೆ ಸಾಮಾನ್ಯ ವಲಯ ವರ್ಗೀಕರಣ ನಿಯಮಗಳ ಕರಡನ್ನು ರೂಪಿಸಿ 2017ರ ಜು.1ರಂದು ನೋಟಿಫಿಕೇಷನ್ ಹೊರಡಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ರಾಜ್ಯ ಸರಕಾರದ ಈ ಕ್ರಮ ಸಂವಿಧಾನದ ನಿಯಮಗಳ ಸ್ಪಷ್ಟ ಉಲ್ಲಂಘನೆ. ಇನ್ನು ಸಾಮಾನ್ಯ ವರ್ಗೀಕರಣ ನಿಯಮಗಳ ಕರಡು ಅವೈಜ್ಞಾನಿಕ ಹಾಗೂ ನಗರ ಯೋಜನೆ ಪರಿಕಲ್ಪನೆಗೆ ವಿರುದ್ಧವಾಗಿದೆ. ಕರಡು ರೂಪಿಸುವಾಗ ಸೂಕ್ತವಾಗಿ ವಿವೇಚನೆ ಬಳಸಿಲ್ಲ. ಹೀಗಾಗಿ, ಸರಕಾರ 2017ರ ಜು.1ರಂದು ಹೊರಡಿಸಿದ ಕರಡು ಅಧಿಸೂಚನೆ ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದಾರೆ. ಅಲ್ಲದೆ, ಅರ್ಜಿ ಇತ್ಯರ್ಥವಾಗುವರೆಗೆ ಕರಡು ಅಧಿಸೂಚನೆ ತಡೆಯಾಜ್ಞೆ ನೀಡುವ ಮೂಲಕ ನಿಯಮಗಳನ್ನು ಅಂತಿಮಗೊಳಿಸುವುದರಿಂದ ಸರಕಾರ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆಯನ್ನು ತಡೆಹಿಡಿಯಬೇಕು ಎಂದು ಮಧ್ಯಂತರ ಮನವಿ ಮಾಡಲಾಗಿದೆ.







