‘ಬ್ಲೂ ವೇಲ್’ನಿಂದ ಪ್ರಭಾವಿತಳಾಗಿ ಕೆರೆಗೆ ಹಾರಿದ್ದ ಬಾಲಕಿ ರಕ್ಷಣೆ

ಜೈಪುರ,ಸೆ.7: ತನ್ನ ಕೈ ಮೇಲೆ ಬ್ಲೂ ವೇಲ್ ಆಕಾರದ ಗಾಯವನ್ನು ಮಾಡಿಕೊಂಡಿದ್ದ 17ರ ಹರೆಯದ ಬಾಲಕಿಯೋರ್ವಳು ಜೋಧಪುರದ ಹೊರವಲಯದಲ್ಲಿರುವ ಕಯ್ಲನಾ ಸರೋವರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಬಾಲಕಿಯು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬ್ಲೂ ವೇಲ್ ಆನ್‌ಲೈನ್ ಚಾಲೆಂಜ್ ಗೇಮ್‌ನ ಅಂತಿಮ ಸವಾಲನ್ನು ಪೂರ್ಣಗೊಳಿಸಲು ಬಯಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಅಂತಿಮ ಸವಾಲನ್ನು ತಾನು ಪೂರ್ಣಗೊಳಿಸದಿದ್ದರೆ ತನ್ನ ತಾಯಿ ಸಾಯುತ್ತಾಳೆ ಮತ್ತು ಕುಟುಂಬವು ತೊಂದರೆಯಲ್ಲಿ ಸಿಲುಕುತ್ತದೆ ಎಂದು ಪೊಲೀಸರಿಗೆ ತಿಳಿಸಿದ್ದ ಬಾಲಕಿ, ತನಗೆ ನೀರಿಗೆ ಹಾರಲು ಬಿಡಿ ಮತ್ತು ಈ ವಿಷಯವನ್ನು ತನ್ನ ಕುಟುಂಬಕ್ಕೆ ತಿಳಿಸಬೇಡಿ ಎಂದು ಪೊಲೀಸರನ್ನು ಪದೇಪದೇ ಕೇಳಿಕೊಂಡಿದ್ದಳು ಎಂದು ಪೊಲೀಸ್ ಅಧಿಕಾರಿ ಲೇಖರಾಜ ಸಿಹಾಗ್ ತಿಳಿಸಿದ್ದಾರೆ.
ಜೋಧಪುರದ ಮಂಡೋರೆ ನಿವಾಸಿ ಹಾಗೂ ಬಿಎಸ್‌ಎಫ್ ಯೋಧರೋರ್ವರ ಪುತ್ರಿಯಾಗಿರುವ ಈ ಬಾಲಕಿ ಸೋಮವಾರ ರಾತ್ರಿ ಪೇಟೆಗೆ ತೆರಳುವ ನೆಪದಲ್ಲಿ ಮನೆಯಿಂದ ಹೊರಬಿದ್ದಿದ್ದಳು. ಆಕೆ ವಾಪಸ್ ಬಾರದಿದ್ದಾಗ ಮನೆಯವರು ಆಕೆಯ ಮೊಬೈಲ್‌ಗೆ ಕರೆ ಮಾಡಿದ್ದು, ಅಪರಿಚಿತ ವ್ಯಕ್ತಿಯೋರ್ವ ಅದನ್ನು ಸ್ವೀಕರಿಸಿದ್ದ. ಗಾಬರಿ ಗೊಂಡ ಅವರು ಪೊಲೀಸ್ ಠಾಣೆಗೆ ಧಾವಿಸಿ ನಾಪತ್ತೆ ದೂರನ್ನು ದಾಖಲಿಸಿದ್ದರು.
ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ನಗರದಿಂದ ಎಂಟು ಕಿ.ಮೀ.ದೂರದಲ್ಲಿ ರುವ ಸರೋವರದ ಸುತ್ತ ಬೈಕಿನಲ್ಲಿ ಸಂಚರಿಸುತ್ತಿದ್ದ ಬಾಲಕಿಯನ್ನು ಪತ್ತೆ ಹಚ್ಚಿದ್ದರು. ತಮ್ಮಿಂದಿಗೆ ಬರುವಂತೆ ಪೊಲೀಸರು ಪದೇಪದೇ ಸೂಚಿಸಿದ್ದರೂ ಆಕೆ ನದಿಯತ್ತ ಧಾವಿಸಿ ನೀರಿಗೆ ಧುಮುಕಿದ್ದಳು. ಆಕೆಯನ್ನು ರಕ್ಷಿಸಿದ ಪೊಲೀಸರು ಹೆತ್ತವರಿಗೆ ಒಪ್ಪಿಸಿದ್ದಾರೆ.
ಕೆಲವು ದಿನಗಳ ಹಿಂದೆ ತಾನು ಬ್ಲೂ ವ್ಹೇಲ್ ಆಟವನ್ನು ತನ್ನ ಮೊಬೈಲ್‌ನಲ್ಲಿ ಡೌನ್ ಲೋಡ್ ಮಾಡಿಕೊಂಡಿದ್ದೆ ಮತ್ತು ಈವರೆಗಿನ ಎಲ್ಲ ಸವಾಲುಗಳನ್ನು ಪೂರ್ಣಗೊಳಿಸಿದ್ದಾಗಿ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.







