ಬಿಜೆಪಿ ಬೈಕ್ ರ್ಯಾಲಿ ಸಂಪೂರ್ಣ ವಿಫಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆ.7: ಬಿಜೆಪಿಯ ಬೈಕ್ ರ್ಯಾಲಿ ಮತ್ತು ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಮಾವೇಶ ಸಂಪೂರ್ಣ ವಿಫಲವಾಗಿದ್ದು, ಜನ ಸ್ಪಂದಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ಮಂಗಳೂರಿನಲ್ಲಿ ಇಂದು ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಕೇವಲ ಮೂರು ಸಾವಿರ ಮಂದಿ ಮಾತ್ರ ಭಾಗವಹಿಸಿದ್ದರು ಎಂದರು.
ಸರಕಾರದ ವಿರುದ್ಧ ಹೋರಾಟ ಮುಂದುವರೆಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಯಡಿಯೂರಪ್ಪ ನೀಡುವ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದನ್ನು ಬಿಟ್ಟಿದ್ದೇನೆ. ಅವರು ಹೇಳುವುದೆಲ್ಲ ಸುಳ್ಳು, ಮಾಡುವುದೆಲ್ಲ ಎಡವಟ್ಟು ಎಂದು ಮುಖ್ಯಮಂತ್ರಿ ವ್ಯಂಗ್ಯವಾಡಿದರು.
ಮಂಗಳೂರಿನಲ್ಲಿ ಬಿಜೆಪಿಯವರು ಸಮಾವೇಶ ನಡೆಸಿದರೆ ತಕರಾರು ಇಲ್ಲ. ಆದರೆ ಬೈಕ್ ರ್ಯಾಲಿಗೆ ಅವಕಾಶ ನೀಡುವುದಿಲ್ಲ. ಬೈಕ್ ರ್ಯಾಲಿ ಮೂಲಕ ಸಮಾಜದ ಶಾಂತಿ ಮತ್ತು ಸಾಮರಸ್ಯ ಹಾಳು ಮಾಡಲು ಬಿಜೆಪಿ ಹೊರಟಿದೆ. ನಾವು ಶಾಂತಿ, ಸಾಮರಸ್ಯ ಕಾಪಾಡುವವರು ಎಂದರು.
ಮಂಗಳೂರು ನಗರದಲ್ಲಿ ಜಾಥಾ ನಡೆಸುವುದಾಗಿ ಬಿಜೆಪಿಯವರು ಮೊದಲೆ ಹೇಳಿದ್ದರೆ ಒಪ್ಪಿಗೆ ನೀಡುತ್ತಿದ್ದೆವು. ಬಿಜೆಪಿಯವರು ಅನುಮತಿ ಪಡೆದು ಜಾಥಾ, ಪಾದಯಾತ್ರೆ ಮಾಡಲಿ. ಆದರೆ, ಬೈಕ್ ರ್ಯಾಲಿ ಬೇಡ ಎಂದ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತಗಳಿಸಲಿದೆ ಎಂದು ಸಿಫೋರ್ ಸಂಸ್ಥೆ ಸಮೀಕ್ಷೆ ಈಗಾಗಲೇ ಹೇಳಿದೆ. ಜನರನ್ನು ದಾರಿ ತಪ್ಪಿಸಲು ಈಗ ಕಾಪ್ಸ್ ಸಂಸ್ಥೆ ಹೆಸರಲ್ಲಿ ಸಮೀಕ್ಷಾ ವರದಿ ಬಿಡುಗಡೆ ಮಾಡಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಬಿಜೆಪಿ, ಜೆಡಿಎಸ್ ಎಷ್ಟೆ ತಮಟೆ ಹೊಡೆದುಕೊಂಡರೂ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಇದರಲ್ಲಿ ಎರಡನೆ ಮಾತೇ ಇಲ್ಲ. ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಯಾರು ಎಂಬುದನ್ನು ಶಾಸಕರು ಮತ್ತು ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.







