‘ಸಿಟ್’ ತನಿಖೆ ಮೇಲೆ ನಂಬಿಕೆ ಇದೆ: ಗೌರಿ ಲಂಕೇಶ್ ಕುಟುಂಬದ ಸದಸ್ಯರು
.jpg)
ಬೆಂಗಳೂರು, ಸೆ.7: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ‘ಸಿಟ್’ ತನಿಖೆ ಮೇಲೆ ನಂಬಿಕೆ ಇದೆ. ಈ ತನಿಖೆಗೆ ನಾವು ಸಹಕಾರ ನೀಡುತ್ತೇವೆ. ಒಂದು ವೇಳೆ ಇದರಲ್ಲಿ ಸೂಕ್ತ ಪರಿಹಾರ ಸಿಗುವುದಿಲ್ಲ ಎಂದರೆ ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒತ್ತಾಯಿಸುತ್ತೇವೆ ಎಂದು ಗೌರಿ ಲಂಕೇಶ್ ಕುಟುಂಬಸ್ಥರು ಹೇಳಿದ್ದಾರೆ.
ಗುರುವಾರ ನಗರದ ಕೋರಮಂಗಲದಲ್ಲಿ ಗೌರಿ ಲಂಕೇಶ್ ಅವರ ಸಹೋದರಿ, ಚಿತ್ರ ನಿರ್ಮಾಪಕಿ ಕವಿತಾ ಲಂಕೇಶ್ ತಮ್ಮ ಸ್ವಗೃಹದಲ್ಲಿ ಸಹೋದರ ಇಂದ್ರಜಿತ್ ಲಂಕೇಶ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕವಿತಾ ಲಂಕೇಶ್, ಗೌರಿ ಲಂಕೇಶ್‌ಗೆ ಯಾವುದೇ ರೀತಿಯ ಬೆದರಿಕೆ ಕರೆ ಬಂದಿರಲಿಲ್ಲ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸಣ್ಣ-ಪುಟ್ಟ ಬೆದರಿಕೆಗಳು ಹಾಕುವುದನ್ನು ಬಿಟ್ಟರೆ, ಬೇರೆ ಯಾವುದೇ ರೀತಿಯ ಬೆದರಿಕೆಗಳೇನೊ ಇರಲಿಲ್ಲ. ಬಹಳ ಹಿಂದೆ ಇಂತಹದ್ದೇ ಒಂದು ಬೆದರಿಕೆಗೆ ಪೊಲೀಸರಿಗೆ ದೂರು ನೀಡಿದ್ದೆವು ಎಂದು ಅವರು ನೆನಪು ಮಾಡಿಕೊಂಡರು.
ಹೇಡಿಯಲ್ಲ: ನನ್ನ ಅಕ್ಕ ಗೌರಿ ಲಂಕೇಶ್ ಹೇಡಿ ಅಲ್ಲ. ಇಂತಹ ಬೆದರಿಕೆ ಕರೆಗೆ ಹೆದರದೇ ಧೈರ್ಯಶಾಲಿಯಾಗಿದ್ದಳು. ಪತ್ರಿಕೆಯಲ್ಲಿ ಬರೆದದ್ದಕ್ಕೆ ಬರುವ ಬೆದರಿಕೆಗಳಿಗೆ ಜಗ್ಗುತ್ತಿರಲಿಲ್ಲ. ಬರೆಯ ಬಾರದು ಅನ್ನುವ ಭಾವನೆ ಯಾವತ್ತೂ ತೋರಿಸಿರಲಿಲ್ಲ. ಪತ್ರಕರ್ತೆಯಾಗಿ ತಪ್ಪಿದ್ದದ್ದನ್ನು ತಪ್ಪೆಂದು ಹೇಳುವುದು ತಪ್ಪಾ. ತಪ್ಪನ್ನು ಎತ್ತಿ ತೋರಿಸಿದರೆ ಕೊಲೆ ಮಾಡುವ ಮಟ್ಟಕ್ಕೆ ಸಮಾಜ ಬಂದಿರುವುದು ನಿಜಕ್ಕೂ ಬೇಸರ ಮೂಡಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
5 ತಿಂಗಳ ಹಿಂದೆಯೇ ಸಿಸಿಟಿವಿ: ಹದಿನೈದು ದಿನಗಳ ಹಿಂದೆಯೆಷ್ಟೇ ಗೌರಿ ತಮ್ಮ ನಿವಾಸಕ್ಕೆ ಸಿಸಿಟಿವಿ ಅಳವಡಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದೆ. ಆದರೆ, 5 ತಿಂಗಳ ಹಿಂದೆಯೇ ಸಿಸಿಟಿವಿ ಹಾಕಲಾಗಿತ್ತು ಎಂದು ಸ್ಪಷ್ಟನೆ ನೀಡಿದ ಅವರು, ಅದು ಇತ್ತೀಚೆಗೆ ಬೆದರಿಕೆ ಕರೆ ಬಂದ ಮೇಲೆ ಹಾಕಿಸಿದ್ದಲ್ಲ. ಅಂತಹ ಯಾವುದೇ ಬೆದರಿಕೆ ಬಂದಿಲ್ಲ. ರವಿವಾರ ದಿನ ಸಾಮಾನ್ಯವಾಗಿ ನಮ್ಮ ಮನೆಗೆ ಬರುತ್ತಿದ್ದರು. ನನ್ನ ಮಗಳ ಜತೆ ಕಾಲ ಕಳೆಯುತ್ತಿದ್ದಳು. ನನಗೆ ಬೆದರಿಕೆ ಕರೆ ಬಂದಿದೆ ಎಂದು ಯಾವತ್ತೂ ಹೇಳಿರಲಿಲ್ಲ. ಅವರ ಅನಿಸಿಕೆ ಹೇಳಿಕೊಳ್ಳುವುದು ಅವರಿಗೆ ಬಿಟ್ಟದ್ದು. ಎಲ್ಲರಿಗೂ ಅವಳು ಅಕ್ಕ ಆಗಿದ್ದಳು. ಮಗನೆ ಅಂತಲೇ ಹೆಚ್ಚಿನವರನ್ನು ಕರೆಯುತ್ತಿದ್ದಳು. ಅಷ್ಟು ಆತ್ಮೀಯತೆ ಇತ್ತು ಎಂದು ಸ್ಮರಿಸಿದರು.
ನನ್ನ ತಂದೆ ಲಂಕೇಶ್ ತಮ್ಮ ಬರವಣಿಗೆಯ ಮೂಲಕ ಸರಕಾರವನ್ನು ಉರುಳಿಸಿ, ಹೊಸ ಸರಕಾರ ಅಧಿಕಾರಕ್ಕೆ ಬರಲು ಕಾರಣಕರ್ತರೆಂಬುದು ಎಲ್ಲರಿಗೂ ಗೊತ್ತು. ಆದರೆ, ಕೊಲೆ ಮಾಡುವ ಮಟ್ಟಕ್ಕೆ ಯಾರೂ ಹೋಗಿರಲಿಲ್ಲ. ಸಮಾಜದ ಈಗಿರುವ ಸ್ಥಿತಿ ಗಮನಿಸಿದರೆ ವಿಷಾದ ಅನ್ನಿಸುತ್ತಿದೆ. ಎಲ್ಲರೂ ಹೊಗಳಬೇಕು, ಚಪ್ಪಾಳೆ ತಟ್ಟಬೇಕೆಂದಿಲ್ಲ. ಆದರೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕಾರ್ಯ ಉತ್ತಮ ಬೆಳವಣಿಗೆ ಅಲ್ಲ ಎಂದರು.
ರಕ್ಷಣೆ ಕೇಳಬೇಕಿಲ್ಲ: ನನ್ನ ಅಕ್ಕನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಬಾರಿ ರಕ್ಷಣೆ ತೆಗೆದುಕೊಳ್ಳಿ ಎಂದು ಹೇಳಿದ್ದರು. ಆದರೆ, ವಾರದ ಹಿಂದೆ ಬಂದಾಗ ಸರಕಾರದಿಂದ ಇಂತಹ ಸಹಾಯ ನಾನು ಅಪೇಕ್ಷಿಸುವುದಿಲ್ಲ. ಬೇರೆ ದೃಷ್ಟಿಯಿಂದ ನಾನು ಹೋರಾಡಿದ್ದೇನೆ. ನನ್ನ ಸ್ವಾರ್ಥಕ್ಕೆ ಯಾವತ್ತೂ ಸರಕಾರದ ಮುಂದೆ ನಿಲ್ಲಲ್ಲ ಎನ್ನುತ್ತಿದ್ದರು. ಬುಧವಾರ ಗೌರಿ ಅಕ್ಕನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬಂದ ಅಭಿಮಾನಿಗಳನ್ನು ಕಂಡಾಗ ಹೆಮ್ಮೆ ಅನ್ನಿಸಿತು. ಸಾಕಷ್ಟು ಅಭಿಮಾನಿಗಳು ಸೇರಿದ್ದರು ಎಂದು ಹೇಳಿದರು.
ಇಂದ್ರಜಿತ್ ಲಂಕೇಶ್ ಮಾತನಾಡಿ, ನನ್ನ ಅಕ್ಕನ ಹತ್ಯೆ ಕುರಿತು ಸೂಕ್ತ ತನಿಖೆ ನಡೆದು ಕೊಲೆಗಾರರನ್ನು ಪತ್ತೆ ಹಚ್ಚಬೇಕು. ಈ ಘಟನೆ ನಮಗೆಲ್ಲಾ ಅತೀವ ನೋವು ತಂದಿದೆ. ಇಂತಹ ಒಬ್ಬ ಮಹಿಳೆ, ಪತ್ರಕರ್ತೆ, ಸಮಾಜದಲ್ಲಿ ದನಿ ಎತ್ತಿ ಮಾತನಾಡುವ, ಅಧಿಕಾರಿಗಳ ವಿರುದ್ಧ ದನಿ ಎತ್ತುವ ಶಕ್ತಿಯ ಕಗ್ಗೊಲೆ ಎಲ್ಲೂ ಆಗಬಾರದು ಎಂಬ ಉದ್ದೇಶ ನಮ್ಮದು ಎಂದರು.
ನಮ್ಮ ಕುಟುಂಬದ ನಿರ್ಧಾರ ಸದ್ಯ ‘ಸಿಟ್’ಗೆ ಸಹಕಾರ ನೀಡುವುದು ಎಂದಾಗಿದೆ. ಬುಧವಾರ ಅಮ್ಮ ಕೂಡ ಸಿದ್ದರಾಮಯ್ಯರಿಗೆ ಕೈಮುಗಿದು ನನ್ನ ಮಗಳಿಗೆ ನ್ಯಾಯ ಒದಗಿಸಿಕೊಡಿ ಎಂದು ಕೋರಿದ್ದಾರೆ. ಸಿಎಂಗೂ ನನ್ನ ಅಕ್ಕನಿಗೂ ಉತ್ತಮ ಬಾಂಧವ್ಯ ಇತ್ತು. ಮಗಳ ರೀತಿ ಅವರು ಪರಿಗಣಿಸಿದ್ದರು. ನಕ್ಸಲರ ಮನಪರಿವರ್ತನೆ ಸೇರಿದಂತೆ ಹಲವು ರೀತಿಯ ಉತ್ತಮ ಹೆಜ್ಜೆ ಇಟ್ಟು ಸರಕಾರಕ್ಕೆ ಒಳ್ಳೆಯ ಹೆಸರು ತಂದಿದ್ದರು. ಇದನ್ನೆಲ್ಲಾ ಗಮನಿಸಿ ಸಿಎಂ ಸಿದ್ದರಾಮಯ್ಯ ‘ಸಿಟ್’ಗೆ ತನಿಖೆಯ ಹೊಣೆ ವಹಿಸಿದ್ದಾರೆ ಎಂದು ತಿಳಿಸಿದರು.
ಒಂದು ವೇಳೆ ಸಿಟ್ ತನಿಖೆಯಿಂದ ನಮಗೆ ನ್ಯಾಯ ಸಿಗಲ್ಲ ಎಂದು ಅನ್ನಿಸಿದರೆ ವೈಯಕ್ತಿಕವಾಗಿ ಸಿಬಿಐಗೆ ತನಿಖೆ ಮಾಡುವಂತೆ ಮನವಿ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಅವರ ಬಳಿಯೇ ಹೇಳಿದ್ದೇನೆ. ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ ಅವರ ಕುಟುಂಬ ಸದಸ್ಯರು ಅನುಭವಿಸುತ್ತಿರುವ ನೋವು ನಮ್ಮ ಕುಟುಂಬಕ್ಕೆ ಆಗಬಾರದು. ಅಕ್ಕನ ಕೊಲೆ ಮೂಲಕ ದನಿಯನ್ನು ಕಟ್ಟಿಹಾಕುವ ಕೆಲಸ ಮಾಡಬಾರದು ಎಂದು ನುಡಿದರು.







